ದೈನಂದಿನ ಜೀವನದಲ್ಲಿ ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ: ತುನ್ನೂರು

| Published : Jun 22 2024, 12:49 AM IST

ದೈನಂದಿನ ಜೀವನದಲ್ಲಿ ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ: ತುನ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ತಲಾ ತಲಾಂತರದಿಂದ ಬಂದಿರುವ ಯೋಗಭ್ಯಾಸವನ್ನು ನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮನಸ್ಸಿನ ಆರೋಗ್ಯ ಸುದೀರ್ಘ ಕಾಲದವರೆಗೆ ಕಾಪಾಡಿಕೊಳ್ಳಬಹುದು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ತಲಾ ತಲಾಂತರದಿಂದ ಬಂದಿರುವ ಯೋಗಭ್ಯಾಸವನ್ನು ನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮನಸ್ಸಿನ ಆರೋಗ್ಯ ಸುದೀರ್ಘ ಕಾಲದವರೆಗೆ ಕಾಪಾಡಿಕೊಳ್ಳಬಹುದು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಪತಂಜಲಿ ಯೋಗ ಸಮಿತಿ ಹಾಗೂ ಸರ್ಕಾರದ ಇತರೆ ಇಲಾಖೆಗಳ ಮತ್ತು ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ (ಸಪ್ನ ಗ್ರೌಂಡ್) ನಡೆದ 10 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸ್ವಯಂ ಮತ್ತು ಸಮಾಜದ ಒಳಿತಿಗೆ ಯೋಗ ಎಂಬುದು ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾಗಿದೆ ಎಂದರು.

ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನ ಅಭ್ಯಾಸವಾಗಿದೆ. ಅನೇಕ ಋಷಿ ಮುನಿಗಳು, ತಪಸ್ವಿಗಳು ಧಾರ್ಮಿಕ ಗುರುಗಳು ಯುಗ ಯುಗಾಂತರಗಳಿಂದ ಯೋಗಭ್ಯಾಸ ಮಾಡಿ ದೈಹಿಕ ಮತ್ತು ಮಾನಸಿಕವಾಗಿ ಪ್ರಯೋಜನ ಪಡೆದಿದ್ದಾರೆ ಎಂದರು.

ಸೂರ್ಯ ಉದಯಿಸುವ ಮುನ್ನವೇ ಯೋಗಪಟುಗಳು ಮೈದಾನದಲ್ಲಿ ಸೇರಿದ್ದರು. ಶಾಲಾ-ಕಾಲೇಜು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗಮಿಸಿ ಯೋಗ ದಿನಾಚರಣೆಗೆ ಮೆರಗು ತಂದರು.

ಪತಂಜಲಿಯ ಯೋಗ ಸಮಿತಿಯ ಸಂಚಾಲಕ ಅನಿಲ್ ಗುರೂಜಿ ಅವರು ಯೋಗಾಸನದ ವಿವಿಧ ಭಂಗಿಗಳನ್ನು ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ನಗರದ ನಾಗರಿಕರಿಗೆ ಯೋಗಭ್ಯಾಸ ಮಾಡಿಸಿದರು.

ಮಕರಾಸನ, ವೃಕ್ಷಾಸನ, ಭುಜಂಗಾಸನ, ವಜ್ರಾಸನ, ದಂಡಾಸನ ಸೇರಿದಂತೆ ವಿವಿಧ ಪ್ರಕಾರದ ಯೋಗಪ್ರದರ್ಶನಗಳು ಮಾಡಲಾಯಿತು. ಯೋಗ ಪ್ರದರ್ಶನದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದರು.

ಯೋಗ ದಿನಾಚರಣೆ ಅಂಗವಾಗಿ ಯೋಗ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಪ್ರಮಾಣಪತ್ರ ವಿತರಿಸಿದರು. ಜಿಲ್ಲಾಧಿಕಾರಿ ಡಾ. ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡಿ, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಗಾಳಿ, ಬ್ರಹ್ಮಕುಮಾರಿ ಮುಖ್ಯಸ್ಥೆ ಕು. ವೀಣಾ, ಡಾ. ಪ್ರಕಾಶ ರಾಜಾಪುರ, ಸಂಗಮೇಶ ಕೆಂಭಾವಿ ಸೇರಿದಂತೆ ಇತರರಿದ್ದರು.