ಎಲ್ಲರೂ ಕನ್ನಡಾಭಿಮಾನಿಗಳಾಗಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ

| Published : Nov 24 2025, 02:45 AM IST

ಸಾರಾಂಶ

ಕನ್ನಡಿಗರು ನಿರಭಿಮಾನಿಗಳಾಗದೇ ಕನ್ನಡಾಭಿಮಾನಿಗಳು ಆಗಬೇಕು. ಕನ್ನಡ ನುಡಿ ಮನವನು ಸೆಳೆವ ಮೋಹನ ಸುಧೆ ಕನ್ನಡದ ಗ್ರಂಥಗಳನ್ನು ಓದುವುದರ ಮೂಲಕ ಆ ಸವಿಯನ್ನು ಸವಿಯಬಹುದು.

ಗದಗ: ಬೇರೆ ಬೇರೆ ಕಡೆಗೆ ಹಂಚಿಹೋಗಿದ್ದ ಪ್ರದೇಶಗಳನ್ನು ಒಂದುಗೂಡಿಸಿದ ಶ್ರೇಯಸ್ಸು ಏಕೀಕರಣಕ್ಕೆ ಹೋರಾಡಿದ ನೇತಾರರಿಗೆ ಸಲ್ಲುತ್ತದೆ. ಕನ್ನಡ ನಾಡು ಸಂಪದ್ಭರಿತವಾದ ನಾಡು ಎಂದು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ತಿಳಿಸಿದರು. ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2772ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕು. ಈ ನೆಲ ಜಲ ತರುಗಳಲ್ಲಿ ವಿಶೇಷತೆ ಇದೆ. ನಮ್ಮ ನಾಡು ನಮ್ಮ ನುಡಿ ಎನ್ನದೆ ಮಾನವನೆದೆ ಸುಡುಗಾಡು ಎನ್ನುತ್ತಾರೆ ಕವಿ ಕುವೆಂಪು. ಕನ್ನಡಿಗರು ನಿರಭಿಮಾನಿಗಳಾಗದೇ ಕನ್ನಡಾಭಿಮಾನಿಗಳು ಆಗಬೇಕು. ಕನ್ನಡ ನುಡಿ ಮನವನು ಸೆಳೆವ ಮೋಹನ ಸುಧೆ ಕನ್ನಡದ ಗ್ರಂಥಗಳನ್ನು ಓದುವುದರ ಮೂಲಕ ಆ ಸವಿಯನ್ನು ಸವಿಯಬಹುದು ಎಂದರು.ಸಮ್ಮುಖ ವಹಿಸಿದ್ದ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಕನ್ನಡದ ಅನೇಕ ಆಯಾಮಗಳನ್ನು ಅವಲೋಕನ ಮಾಡುವುದು ಸಹಜ. ತೋಂಟದಾರ್ಯ ಮಠ ಕನ್ನಡಕ್ಕಾಗಿ ಕೈಯೆತ್ತಿದ ಮಠ. ಡಾ. ಸಿದ್ದಲಿಂಗ ಶ್ರೀಗಳು ಗೋಕಾಕ ಚಳವಳಿಯ ಸಂದರ್ಭದಲ್ಲಿ ಹೋರಾಟಗಾರೊಂದಿಗೆ ತಹಸೀಲ್ದಾರ್ ಕಚೇರಿ ಮುಂದೆ ಕುಳಿತು ಹೋರಾಟ ಮಾಡಿದರು. ಕನ್ನಡಕ್ಕೆ ಹೋರಾಡಿದ ಮಹನೀಯರನ್ನು ಕೃತಜ್ಞತೆಯಿಂದ ನೆನೆಯಬೇಕು ಎಂದರು.ಧಾರವಾಡದ ಅಂಜುಮನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ರುದ್ರೇಶ ಮೇಟಿ ಮಾತನಾಡಿ, ನಾನು ಚೆನ್ನಾಗಿ ಬದುಕಿದ್ದೇನೆ ಎಂದರೆ ಅದು ಕನ್ನಡದಿಂದ. ನನ್ನ ನೌಕರಿ ಕನ್ನಡದ್ದು. ನನ್ನ ಭಾಷೆ ಕನ್ನಡ. ನಾನು ಸಾಧನೆ ಮಾಡಿದ್ದು ಕನ್ನಡದಲ್ಲಿ. ಆದರೆ ಯುಪಿಎಸ್‌ಸಿ ಯಲ್ಲಿ ಕನ್ನಡ ಇದೆ. ಆದರೆ ಕೆಪಿಎಸ್‌ಸಿಯಲ್ಲಿ ಕನ್ನಡವಿಲ್ಲ. ನಮಗೆ ಪ್ರದೇಶದ ಪ್ರೀತಿಗಿಂತಲೂ ನಾಡಿನ ಬಗ್ಗೆ ಪ್ರೀತಿ ಬೇಕು. ಭಾರತ ಏನಾದರೂ ಏಳ್ಗೆಯಾಗುವದಿದ್ದರೆ ಅದು ಕನ್ನಡದಿಂದಲೇ ಎಂದು ಬೇಂದ್ರೆಯವರು ಮನೆಯ ಮುಂದೆ ಬರೆದಿರುವರು. ಈ ಅಭಿಮಾನ ಬರಬೇಕು ಎಂದರು.ಸರ್ಕಾರಿ ಐಟಿಐ ಕಾಲೇಜಿನ ಪ್ರಾ. ಡಾ. ಬಸವರಾಜ ಮಲ್ಲೂರು, ಬೆಸ್ಟ್ ಪರ್ಫಾರ್ಮಿಂಗ್ ಐಟಿಐ ಆಫ್ ಕರ್ನಾಟಕ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಐಟಿಐ ಶಿರೋಳದ ಪ್ರಾ. ಬಿ.ಎಸ್. ಸಾಲಿಮಠ ಹಾಗೂ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಕಲಾ ಕುಟೀರ ಗದಗ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.

ನಾಡು ನುಡಿಯ ನೃತ್ಯ ರೂಪಕವನ್ನು ಬಸವೇಶ್ವರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತುಂಬಾ ಸುಂದರವಾಗಿ ಪ್ರದರ್ಶನ ನೀಡಿದರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ವೃತ್ವಿಕ ಹೂಗಾರ, ವಚನ ಚಿಂತನವನ್ನು ಶ್ರೇಯಸ್ ಅಂಗಡಿ ನಡೆಸಿದರು. ದಾಸೋಹ ಸೇವೆಯನ್ನು ಬಸವರಾಜ ಭೀಮಪ್ಪ ಅಸ್ಕಿ, ದೇವರ ಹಿಪ್ಪರಗಿ, ಶಿವಪ್ಪ ಮಲ್ಲಪ್ಪ ಜಡಗೊಂಡ ಮತ್ತು ಕುಟುಂಬ ವರ್ಗದವರು ವಹಿಸಿದ್ದರು.

ಬಾಲಚಂದ್ರ ಭರಮಗೌಡ್ರ, ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಇದ್ದರು. ವೀರನಗೌಡ ಮರಿಗೌಡ್ರ ಪರಿಚಯಿಸಿದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರೂಪಿಸಿದರು.