ಪ್ರತಿಯೊಬ್ಬ ವ್ಯಕ್ತಿಯು ಮರಣದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಬೇಕು. ಇದರಿಂದ ಮತ್ತೊಬ್ಬ ಅಂಧರ ಬದುಕಲ್ಲಿ ಬೆಳಕು ಮೂಡಿಸಿದಂತಾಗುತ್ತದೆ. ಈ ಕುರಿತು ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯ ಎಂದು ಡಾ.ಅನುಶ್ರೀ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಪ್ರತಿಯೊಬ್ಬ ವ್ಯಕ್ತಿಯು ಮರಣದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಬೇಕು. ಇದರಿಂದ ಮತ್ತೊಬ್ಬ ಅಂಧರ ಬದುಕಲ್ಲಿ ಬೆಳಕು ಮೂಡಿಸಿದಂತಾಗುತ್ತದೆ. ಈ ಕುರಿತು ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯ ಎಂದು ಡಾ.ಅನುಶ್ರೀ ತಿಳಿಸಿದರು. ನಗರದ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯಲ್ಲಿನ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ಚಳ್ಳಕೆರೆ ರಸ್ತೆ, ಚಿತ್ರದುರ್ಗ ಸಹಯೋಗದಲ್ಲಿ ಕಾಲೇಜ್ ಆಫ್ ಎಕ್ಸಲೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಂಗವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.ಮರಣೋತ್ತರ ಮಾನವ ದೇಹವನ್ನು ಹೂಳಲಾಗುತ್ತದೆ ಅಥವಾ ಸುಡಲಾಗುತ್ತದೆ. ಇದರಿಂದ ಕಣ್ಣುಗಳು ಸಹ ನಾಶವಾಗುತ್ತವೆ. ಆದರೆ ಒಬ್ಬರು ಕಣ್ಣುಗಳನ್ನು ದಾನ ಮಾಡಿದರೆ ಕುರುಡುತನದಿಂದ ಬಳಲುತ್ತಿರುವ ಅನೇಕ ಜನರು ದೃಷ್ಟಿಯನ್ನು ಮರಳಿ ಪಡೆಯಬಹುದು ಮತ್ತು ಹೊಸ ಜೀವನವನ್ನು ಪಡೆಯಬಹುದು. ಕತ್ತಲೆಯಲ್ಲಿ ವಾಸಿಸುವವರಿಗೆ ಬೆಳಕು ನೀಡುವುದನ್ನು ಶ್ರೇಷ್ಠ ಸೇವೆ ಎಂದು ಪರಿಗಣಿಸಲಾಗುತ್ತದೆ. ಇದು ಕೇವಲ ದೇಹದ ಒಂದು ಭಾಗವನ್ನು ದಾನ ಮಾಡುವುದಲ್ಲ ಬದಲಾಗಿ ಯಾರೊಬ್ಬರ ಜೀವನದಲ್ಲಿ ಭರವಸೆಯ ದೀಪವನ್ನು ಬೆಳಗಿಸುತ್ತದೆ. ನೇತ್ರದಾನವು ಸಮಾಜದಲ್ಲಿ ಆರ್ಥಿಕ ಮತ್ತು ಮಾನಸಿಕ ಸಂಕಷ್ಟಗಳನ್ನು ಕಡಿಮೆ ಮಾಡುತ್ತದೆ. ದೃಷ್ಟಿ ಕಳೆದುಕೊಳ್ಳುವವರು ಹೆಚ್ಚಾಗಿ ಉದ್ಯೋಗ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ, ಆದರೆ ಒಬ್ಬ ದಾನಿ ಮಾತ್ರ ತಮ್ಮ ಸ್ವಾವಲಂಬನೆಯನ್ನು ಪುನಃಸ್ಥಾಪಿಸಬಹುದು ಎಂದರು.

ನಟ ಪುನೀತ್ ರಾಜ್‍ಕುಮಾರ್ ಅವರಂತೆಯೇ ನಾವು ಕೂಡ ನೇತ್ರದಾನ ಮಾಡುವ ಪ್ರತಿಜ್ಞೆ ಮಾಡಬೇಕು. ಭಾರತದಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿರಂತರವಾಗಿ ಹೆಚ್ಚುತ್ತಿವೆ. ಅಂಕಿ ಅಂಶಗಳು ವಾರ್ಷಿಕವಾಗಿ 20 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಹೊರಹೊಮ್ಮುತ್ತವೆ. ಕಾರ್ನಿಯಲ್ ಅಂಧತ್ವ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಕುರುಡುತನದಿಂದ ದೃಷ್ಟಿ ಕಳೆದುಕೊಂಡಿದ್ದಾರೆ, ಮತ್ತು ಅವರ ಜೀವನ ಎಷ್ಟು ಕಷ್ಟಕರವಾಗಿದೆ. ಸಾವಿನ ನಂತರ ದೇಹವು ನಾಶವಾಗುತ್ತದೆ. ಆದರೆ ಕಣ್ಣುಗಳನ್ನು ದಾನ ಮಾಡಿದಾಗ ಅನೇಕರಿಗೆ ದೃಷ್ಟಿ ನೀಡಬಹುದು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಡಿನ ಅಧ್ಯಕ್ಷ ಪ್ರಶಾಂತ್. ವಿ.ಎಲ್. ಮಾತನಾಡಿ, ನಾವು ಮರಣದ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡಿದರೆ ಇನ್ನೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಕಾಶವನ್ನು ತರಬಹುದು.ಸಾಮಾನ್ಯವಾಗಿ ನಾವು ಹೃದಯ, ಮೂತ್ರಪಿಂಡ ಅಥವಾ ಯಕೃತ್ತಿನಂತಹ ಅಂಗಾಂಗ ದಾನಗಳ ಬಗ್ಗೆ ಮಾತನಾಡುತ್ತೇವೆ. ಆದರೆ ನೇತ್ರದಾನವೂ ಅಷ್ಟೇ ಮುಖ್ಯ. ಮೂರು ವರ್ಷದೊಳಗಿನ ಶಿಶುಗಳನ್ನು ಹೊರತುಪಡಿಸಿ, ಯಾರಾದರೂ ಮರಣದ ನಂತರ ಕಣ್ಣುಗಳನ್ನು ದಾನ ಮಾಡಬಹುದು. ಇದನ್ನು 4 ರಿಂದ 6 ಗಂಟೆಗಳ ಒಳಗೆ ಮಾಡಬೇಕು. ಇಲ್ಲದಿದ್ದರೆ ಅವುಗಳನ್ನು ಬಳಸಲಾಗುವುದಿಲ್ಲ. ಆಧುನಿಕ ವೈದ್ಯಕೀಯ ಪ್ರಗತಿಯೊಂದಿಗೆ ಮೊದಲು ಒಂದು ಕಣ್ಣು ಒಬ್ಬ ವ್ಯಕ್ತಿಗೆ ಮಾತ್ರ ದೃಷ್ಟಿಯನ್ನು ಪುನಃ ಸ್ಥಾಪಿಸಬಹುದಿತ್ತು. ಆದರೆ ಈಗ ಒಂದು ಕಣ್ಣು ಮೂರು ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.

ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‍ನ ಎಸ್.ವಿ. ಗುರುಮೂರ್ತಿ ಮಾತನಾಡಿ, ನೇತ್ರದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಮರಣಾನಂತರ ಕಣ್ಣುಗಳನ್ನು ದಾನ ಮಾಡಲು ಜನರನ್ನು ಪ್ರೋತ್ಸಾಹಿಸುವುದು ಅಗತ್ಯ ಎಂದರು.ನೇತ್ರದಾನ ಪಾಕ್ಷಿಕವನ್ನು ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‍ನ ಅಧ್ಯಕ್ಷ ಎಸ್. ವಿರೇಶ್ ಉದ್ಘಾಟಿಸಿದರು,

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷೆ ಗಾಯತ್ರಿ ಶಿವರಾಂ, ಸಿ.ಎಲ್. ಮಧುಸೂದನ ರೆಡ್ಡಿ, ಪಿ.ಬಿ.ಶಿವರಾಂ, ಡಾ,ನಾಗರಾಜ್, ಕೆ.ಸಿ.ರಾಮು, ಸುರೇಶ್ ಬಾಬು ಭಾಗವಹಿಸಿದ್ದರು.