ಪ್ರತಿಯೊಬ್ಬರು ಅಪೌಷ್ಟಿಕತೆ ಉಂಟಾಗದಂತೆ ಎಚ್ಚರ ವಹಿಸಬೇಕು: ಬಿ.ಜಿ. ದಿನೇಶ್

| Published : Jan 19 2024, 01:47 AM IST

ಪ್ರತಿಯೊಬ್ಬರು ಅಪೌಷ್ಟಿಕತೆ ಉಂಟಾಗದಂತೆ ಎಚ್ಚರ ವಹಿಸಬೇಕು: ಬಿ.ಜಿ. ದಿನೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಆಸ್ಪತ್ರೆಗಳಲ್ಲಿ ಟಿಬಿಗೆ ಉಚಿತ ಚಿಕಿತ್ಸೆ ದೊರೆಯಲಿದ್ದು, ರೋಗಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು. ಒಂದು ಲಕ್ಷಕ್ಕೆ 140- 150 ಜನರಲ್ಲಿ ಕ್ಷಯರೋಗ ಕಾಣಿಸಿಕೊಳ್ಳುತ್ತಿದ್ದು, ವರ್ಷದಲ್ಲಿ ಸರಿಸುಮಾರು 1500 ಜನರಲ್ಲಿ ಕಂಡು ಬರುತ್ತಿದೆ. ಸರ್ಕಾರದ ಜೊತೆ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಇದನ್ನು ತಡೆಗಟ್ಟಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆಯುಂಟಾದಾಗ ಕ್ಷಯರೋಗ ಕಾಣಿಸಿಕೊಳ್ಳುತ್ತಿದ್ದು, ಪ್ರತಿಯೊಬ್ಬರು ಅಪೌಷ್ಟಿಕತೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ತಿಳಿಸಿದರು.

ನಗರದ ಬೆಂಕಿ ನವಾಬ್ ರಸ್ತೆಯಲ್ಲಿರುವ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದಲ್ಲಿ ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಕ್ಷಯರೋಗ ನಿರ್ಮೂಲನಾ ಆಂದೋಲನದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಟಿಬಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. ರೋಗಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಮಾತನಾಡಿ, ಒಂದು ಲಕ್ಷಕ್ಕೆ 140- 150 ಜನರಲ್ಲಿ ಕ್ಷಯರೋಗ ಕಾಣಿಸಿಕೊಳ್ಳುತ್ತಿದ್ದು, ವರ್ಷದಲ್ಲಿ ಸರಿಸುಮಾರು 1500 ಜನರಲ್ಲಿ ಕಂಡು ಬರುತ್ತಿದೆ. ಸರ್ಕಾರದ ಜೊತೆ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಇದನ್ನು ತಡೆಗಟ್ಟಬಹುದು ಎಂದರು.

ದೇಹದಲ್ಲಿ ಅಪೌಷ್ಟಿಕತೆ ಹೆಚ್ಚಾದಾಗ ಟಿಬಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಲಾಖೆ ವತಿಯಿಂದ ನೇರ ನಿಗಾ ವಹಿಸುವ ಮೂಲಕ ಸಾರ್ವಜನಿಕರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಉಚಿತ ಕಿಟ್‌ ಗಳಂತಹ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.

ಇದೇ ವೇಳೆ 50 ಹೆಚ್ಚು ಜನರಿಗೆ ಬೇಳೆ, ಎಣ್ಣೆ, ವಿವಿಧ ಕಾಳುಗಳು ಮತ್ತು ಪೌಷ್ಟಿಕಾಂಶ ಪೌಡರ್‌ ವುಳ್ಳ ಕಿಟ್ ವಿತರಿಸಲಾಯಿತು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮೊಹಮದ್ ಶಿರಾಜ್ ಅಹ್ಮದ್, ಯುವ ರೆಡ್ ಕ್ರಾಸ್ ರಾಜ್ಯ ನಿರ್ದೇಶಕ ಎಂ.ಎಸ್. ಶರತ್, ಕಾರ್ಯದರ್ಶಿ ಎಸ್.ಎಸ್. ವೈದ್ಯನಾಥ್, ರಘುಲಾಲ್ ಔಷಧ ಸಂಸ್ಥೆ ಮಾಲೀಕ ವಿಜಯ್ ರಾಘವನ್ ಮೊದಲಾದವರು ಇದ್ದರು.