ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರತಿಯೊಬ್ಬರು ಧರ್ಮ ಸಂರಕ್ಷಣೆಗೆ ಬದ್ಧರಾಗಿ ಮತ್ತು ತಮ್ಮ ಕುಟುಂಬದಲ್ಲಿರುವ ಮಕ್ಕಳಿಗೆ ನಮ್ಮ ಪರಂಪರೆ, ಸಂಸ್ಕಾರದ ಮತ್ತು ಧಾರ್ಮಿಕ ಅರಿವು ಮೂಡಿಸಬೇಕು ಎಂದು ಉತ್ತಾರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.ಗರದ ಉತ್ತರಾದಿಮಠ ಶ್ರೀರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ಪೂಜೆ ಮಾಡುವುದರಿಂದ ದೇವರನ್ನು ಗೆಲ್ಲಲು ಸಾಧ್ಯವಿಲ್ಲ. ತಪಸ್ಸಿನ ಜೊತೆಗೆ, ಜ್ಞಾನ ಸಂಪಾದಿಸಿದಾಗ ಮಾತ್ರ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ. ವೇದೋಪನಿಷತ್ತುಗಳು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಂಡಲ್ಲಿ ಮೋಕ್ಷ ಪಡೆಯಬಹುದು ಎಂದು ಹೇಳಿದರು.
ಭಗವಂತನ ನಾಮಸ್ಮರಣೆಯಲ್ಲಿ ಯಾರು ಇರುತ್ತಾರೆಯೋ ಅವರಿಗೆ ಕಷ್ಟದ ಅರಿವು ಬರುವುದಿಲ್ಲ. ಅದಕ್ಕಾಗಿ, ದೈನಂದಿನ ಕಾರ್ಯದ ಜೊತೆಗೆ ಭಗವಂತನ ಪ್ರಾರ್ಥನೆ ಮಾಡಿ ಆತನ ಪ್ರೀತಿ ಸಂಪಾದಿಸಿದಲ್ಲಿ ಮೋಕ್ಷ ಸಾಧಿಸಲು ಸಾಧ್ಯ. ಮಾನವನಾಗಿ ಜನಿಸಿದ ಮೇಲೆ ನಮ್ಮ ಸಂಸ್ಕಾರಗಳನ್ನು ಅರಿತು ಬದುಕು ಸಾಗಿಸಬೇಕು ಎಂದು ಸತ್ಯಾತ್ಮತೀರ್ಥ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.ನಗರದ ಉತ್ತರಾದಿಮಠದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರವಚನ, ನೆರೆದಿದ್ದ ನೂರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು. ಶ್ರೀಮಠದ ಮೂಲ ರಾಮದೇವರ ಪೂಜೆ ನೆರವೇರಿಸಿದರು. ಶ್ರೀಮಠದ ದಿವಾನರಾದ ಶಶಿ ಆಚಾರ್, ಯಾದಗಿರಿಯ ಉತ್ತರಾದಿಮಠದ ಮಠಾಧಿಕಾರಿ ಪಂ. ನರಸಸಿಂಹಾಚಾರ ಪುರಾಣಿಕ, ಮಠದ ವ್ಯವಸ್ಥಾಪಕರಾದ ರಾಘವೇಂದ್ರಾಚಾರ ಜೋಶಿ, ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ನಾರಾಯಣ ಪಸಪೂಲ್, ವಿಠ್ಠಲಾಚಾರ್, ಗುರುರಾಜ ದೇಸಾಯಿ., ಗೋವರ್ಧನ ಪುರಾಣಿಕ, ಸತ್ಯನಾರಾಯಣರಾವ್, ಗಿರಿಧರ್ ತೇಂಗಳಿ, ಪಂಚಾಹತ್ರಿ ಗುಂಡೂರಾವ್, ಪ್ರಹ್ಲಾದ್ ದೇಸಾಯಿ ಸೇರಿದಂತೆ ಯುವಕ ಮಂಡಳಿ ಸದಸಸ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಅಸಂಖ್ಯಾತ ಭಕ್ತ ಸಮೂಹ ಪಾಲ್ಗೊಂಡಿದ್ದರು.