ಸಾರಾಂಶ
ಆಪರೇಷನ್ ಸಿಂದೂರದಂತಹ ವಿಚಾರದಲ್ಲಿ ಎಲ್ಲರೂ ದೇಶದ ಪರವಾಗಿರಬೇಕು ಎಂದು ಹೇಳುವ ಮೂಲಕ ಕೋಲಾರ ಶಾಸಕ ಕೊತ್ತೂರು ಮಂಜುನಾಥಗೆ ಮಹಿಳಾ ಮತ್ತು ಮಕ್ಕಳ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
- ಕೋಲಾರ ಶಾಸಕ ಕೊತ್ತೂರು ಮಂಜುನಾಥ ಹೇಳಿಕೆಗೆ ಸಚಿವೆ ಟಾಂಗ್
- ವಿಪಕ್ಷ ನಾಯಕ ಆರ್.ಅಶೋಕ, ಶೆಟ್ಟರ್ ಹೇಳಿಕೆಗೂ ಸಚಿವೆ ತಿರುಗೇಟು - - -ಕನ್ನಡಪ್ರಭ ವಾರ್ತೆ ದಾವಣಗೆರೆ ಆಪರೇಷನ್ ಸಿಂದೂರದಂತಹ ವಿಚಾರದಲ್ಲಿ ಎಲ್ಲರೂ ದೇಶದ ಪರವಾಗಿರಬೇಕು ಎಂದು ಹೇಳುವ ಮೂಲಕ ಕೋಲಾರ ಶಾಸಕ ಕೊತ್ತೂರು ಮಂಜುನಾಥಗೆ ಮಹಿಳಾ ಮತ್ತು ಮಕ್ಕಳ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದರು.
ಹರಿಹರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಶದ ಪರವಾಗಿ ಮಾತನಾಡಬೇಕು. ಅದರಲ್ಲೂ ಆಪರೇಷನ್ ಸಿಂದೂರರಂತಹ ವಿಚಾರದಲ್ಲಿ ಎಲ್ಲರೂ ದೇಶದ ಪರ ಇರಬೇಕು. ಕಾಮಾಲೆ ಕಣ್ಣಿನವರಿಗೆ ಕಂಡಿದ್ದೆಲ್ಲಾ ಹಳದಿಯಂತೆ. ಹಾಗಾಗಿದೆ ವಿಪಕ್ಷ ನಾಯಕ ಆರ್.ಅಶೋಕ ಅಣ್ಣನವರ ಹೇಳಿಕೆ. ಅಶೋಕಣ್ಣ ಅವರು ಬುದ್ಧಿವಂತ ಅಂತಾ ತಿಳಿದುಕೊಂಡಿದ್ದೆ. ಅಷ್ಟೇ ಹೇಳ್ತೀನಿ ಎಂದು ಗ್ರೇಟರ್ ಬೆಂಗಳೂರು ವಿಚಾರದ ಬಗ್ಗೆ ವಾಟರ್ ಬೆಂಗಳೂರು ಅಂತಾ ಟೀಕಿಸಿದ ಆರ್.ಅಶೋಕ ಹೇಳಿಕೆ ಕುರಿತ ಪ್ರಶ್ನೆಗೆ ಸಚಿವೆ ಉತ್ತರಿಸಿದರು.ಜಗದೀಶ ಶೆಟ್ಟರ್ ಮಾಜಿ ಮುಖ್ಯಮಂತ್ರಿ, ಅನುಭವಿಗಳಿದ್ದಾರೆ. ಅಂತಹವರು ಮುಖ್ಯಮಂತ್ರಿಯಾಗಿ ಮತ್ತೆ ಮಂತ್ರಿ ಮಂಡಲಕ್ಕೆ ಬಂದವರು. ಅಂತಹವರ ಬಗ್ಗೆ ನಾವೇನು ಹೇಳಲಾಗುತ್ತದೆ ಎಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆಯೆಂಬ ಶೆಟ್ಟರ್ ಹೇಳಿಕೆಗೆ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದರು.
ಸೇನಾಧಿಕಾರಿ ಸೋಫಿಯಾ ಖುರೇಷಿ ಬಗ್ಗೆ ಬಿಜೆಪಿ ನಾಯಕ ಅವಹೇಳನ ಮಾಡಿದ್ದು ಖಂಡನೀಯ. ಮನುಸ್ಮೃತಿ ಇರುವಂತಹ ಗಂಡಸರಿಗೆ, ರಾಜಕಾರಣಿಗಳಿಗೆ ನನ್ನ ಧಿಕ್ಕಾರ ಹೇಳುತ್ತೇನೆ. ನಮ್ಮ ನಾಯಕರು ಹೇಳಿದಂತೆ ನಾವು ಇಂತಹ ವಿಚಾರದಲ್ಲಿ ಸರ್ಕಾರದ ಪರವಾಗಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.- - -
(ಫೋಟೋ: ಲಕ್ಷ್ಮೀ ಹೆಬ್ಬಾಳ್ಕರ್)