ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಜನ ತಮ್ಮ ಪ್ರಾಣ ಅರ್ಪಿಸಿದ್ದಾರೆ. ನಾವು ಎಲ್ಲರನ್ನೂ ನೆನಪಿಸಿಕೊಂಡು ಅವರಂತೆ ದೇಶ ಸೇವೆ ಮಾಡಲು ಸನ್ನದ್ಧರಾಗಬೇಕು ಎಂದು ಮಾಜಿ ಸೈನಿಕ ಸುಬೇದಾರ್, ಮೇಜರ್ ಎ.ಆರ್.ರಾಜೇಂದ್ರ ಬಾಸ್ಟಿನ್ ಹೇಳಿದರು.ಭಾರತೀ ಕಾಲೇಜಿನ ಕ್ರೀಡಾಂಗಣದಲ್ಲಿ ಭಾರತೀ ವಿದ್ಯಾಸಂಸ್ಥೆ ಅಂಗಸಂಸ್ಥೆಯ ಆಶ್ರಯದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವಕ- ಯುವತಿಯರು ಭಾರತೀಯ ಸೇನೆಗೆ ಸೇರಬೇಕು. ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡು ದೇಶ ಸೇವೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡರು ಮಾತನಾಡಿ, ಭಾರತ ವೈಜ್ಞಾನಿಕ, ಸಾಂಸ್ಕೃತಿಕ, ರಾಜಕೀಯವಾಗಿಯೂ ಅಭಿವೃದ್ಧಿ ಹೊಂದಿದೆ. ಅಧ್ಯಾಪಕರು ಬೋಧನೆಯಲ್ಲಿ ದೇಶಭಕ್ತಿ, ದೇಶ ಸೇವೆ ಬಗ್ಗೆ ಅರಿವು ಮೂಡಿಸಬೇಕು ಎಂದರು.ನಂತರ ಭಾರತೀ ಪ್ರೌಢಶಾಲೆ, ಭಾರತೀ ಪದವಿ ಪೂರ್ವ ಕಾಲೇಜು, ಪದ್ಮ ಜಿ. ಮಾದೇಗೌಡ ಕಾಲೇಜ್ ಆಫ್ ನರ್ಸಿಂಗ್, ಭಾರತಿ ಕಾಲೇಜ್ ಅಫ್ ಫಾರ್ಮಸಿ, ಭಾರತೀ ಶಿಕ್ಷಣ ಮಹಾವಿದ್ಯಾಲಯ, ಭಾರತಿ ಸ್ಕೂಲ್ ಆಫ್ ಎಕ್ಸಲೆನ್ಸ್. ಬಿಇಟಿ ಪಾಲಿಟೆಕ್ನಿಕ್ ಮತ್ತು ಭಾರತೀ ಕಾಲೇಜಿನ ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಲೆಫ್ಟಿನೆಂಟ್ ಸಿ ಮಲ್ಲೇಶ್ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.
ಅತ್ಯುತ್ತಮ ಪಥ ಸಂಚಲನ ಮಾಡಿದ ಭಾರತೀ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರಥಮ ರೋಲಿಂಗ್ ಟ್ರೋಫಿ ನೀಡಲಾಯಿತು. ಬಿ.ಇ.ಟಿ ಪಾಲಿಟೆಕ್ನಿಕ್ ಕಾಲೇಜಿಗೆ ದ್ವಿತೀಯ ರೋಲಿಂಗ್ ಟ್ರೋಪಿ ನೀಡಿ ಗೌರವಿಸಲಾಯಿತು.ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ, ಭಾಷಣ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಣ, ಕ್ರೀಡೆ, ಕಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಮೇಜರ್ ಡಾ.ಶಿವಸ್ವಾಮಿ ಅವರ ತಂದೆ- ತಾಯಿ ಶ್ರೀಮತಿ ಚೌಡಮ್ಮ ಸಿದ್ದೇಗೌಡರ ಹೆಸರಿನಲ್ಲಿ ದತ್ತಿ ನೀಡಿದ 25 ಸಾವಿರ ರು. ಬಡ್ಡಿ ಹಣದಿಂದ ಬಂದ ಮೊತ್ತ ವನ್ನು ಕೆಡೆಟ್ಸ್ ಕೆ.ಎಂ.ಪ್ರಸನ್ನ ಮತ್ತು ಬಿ.ಎಂ.ಪುನೀತ್ ರವರಿಗೆ ನೀಡಿ ಅಭಿನಂದಿಸಲಾಯಿತು
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರೊ.ಎಸ್.ನಾಗರಾಜ, ಡಾ.ಎಸ್.ಎಲ್.ಸುರೇಶ್, ಡಾ.ಬಿ.ಆರ್.ಚಂದನ್, ಡಾ.ಬಾಲಸುಬ್ರಹ್ಮಣ್ಯಂ, ಡಾ.ತಮಿಜ್ ಮಣಿ, ಸಿ.ರಮ್ಯಾ, ಜಿ.ಬಿ.ಪಲ್ಲವಿ, ಪಿ.ರಾಜೇಂದ್ರ ರಾಜೇಅರಸು, ದೈಹಿಕ ಶಿಕ್ಷಕ ಸುನೀಲ್ ಕುಮಾರ್ ಸೇರಿ ಅಂಗಸಂಸ್ಥೆ ಮುಖ್ಯಸ್ಥರು, ಅಧ್ಯಾಪಕರು ಹಾಜರಿದ್ದರು