ಸಾರಾಂಶ
ಶಿಗ್ಗಾಂವಿ: ನಾನು ಜಾತಿ, ಮತ, ಪಂಥ ಭೇದವಿಲ್ಲದೆ ಕೆಲಸ ಮಾಡಿದ್ದೇನೆ. ಚುನಾವಣೆ ಬರುತ್ತವೆ ಹೋಗುತ್ತವೆ. ಯಾರಾದರೂ ಶಾಸಕರಾಗಬಹುದು, ಯಾರಾದರೂ ಸಂಸದರಾಗಬಹುದು. ಆದರೆ, ಊರಿನ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ನಡೆಸುತ್ತಿರುವ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಹಳೆ ಮುತ್ತಳ್ಳಿ, ತಿಮ್ಮಾಪುರ, ಎನ್.ಎಂ. ತಡಸ, ಕಡಹಳ್ಳಿ, ಹಿರೇಬೆಂಡಿಗೇರಿ, ಚಿಕ್ಕಬೆಂಡಿಗೇರಿ, ಬೆಳವಲಕೊಪ್ಪ, ಸುರುಪ್ ಬೆಂಡಿಗೇರಿ ಗ್ರಾಮಗಳಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿ ಮಾತನಾಡಿದರು.ಯಾವುದೇ ಧರ್ಮ, ದೇಶ, ಸಮಾಜದಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿರುವುದಿಲ್ಲ. ಆದರೆ, ಮನುಷ್ಯರಾಗಿ ಹುಟ್ಟಿದ ಮೇಲೆ ಬದುಕು ನಮ್ಮ ಕೈಯಲ್ಲಿರುತ್ತದೆ. ನಾವೆಲ್ಲ ಒಂದು ಎಂದು ಕೆಲಸ ಕಾರ್ಯಗಳನ್ನು ಮಾಡೋಣ, ನಿಮ್ಮ ಒಬ್ಬ ಸಹೋದರ ನಿಮ್ಮ ಬೆನ್ನ ಹಿಂದೆ ಇದ್ದಾನೆ. ನೀವು ಯಾವಾಗ ಕರೆದರೂ ನಿಮ್ಮ ಸಮಸ್ಯೆ ಪರಿಹಾರಕ್ಕೆ ಬರುತ್ತಾನೆ ಎಂಬ ವಿಶ್ವಾಸ ಇಟ್ಟುಕೊಳ್ಳಿ ಎಂದು ಭರವಸೆ ನೀಡಿದರು.
ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನರ ಪ್ರೀತಿ ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ನಿಮ್ಮ ಸಂಬಂಧ ಶಾಶ್ವತವಾದದ್ದು. ನನ್ನನ್ನು ನಾಲ್ಕು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ, ಉಪಕಾರ ಮಾಡಿದವರ ಉಪಕಾರ ಸ್ಮರಣೆ ಮಾಡುವುದು ನಮ್ಮ ಧರ್ಮ ಎಂದು ಹೇಳಿದರು.ಸಾಮಾನ್ಯವಾಗಿ ರಾಜಕಾರಣದಲ್ಲಿ ಚುನಾವಣೆಗೆ ಸೀಮಿತ ಅಥವಾ ರಾಜಕಾರಣಕ್ಕೆ ಸೀಮಿತವಾದ ಸಂಬಂಧಗಳಿರುತ್ತವೆ. ಎರಡು ರೀತಿಯ ರಾಜಕಾರಣ ಇರುತ್ತದೆ. ಒಂದು ಅಧಿಕಾರದ ರಾಜಕಾರಣ, ಇನ್ನೊಂದು ಜನರ ರಾಜಕಾರಣ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಜನರ ರಾಜಕಾರಣ ಮಾಡುತ್ತ ಬಂದಿದ್ದೇನೆ. ಆ ಪ್ರೀತಿ ಉಳಿಸಿಕೊಳ್ಳಲು ನನ್ನ ಜೀವನದ ಉಸಿರಿರುವ ವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಅಭಿವೃದ್ಧಿ ನಿರಂತರ ಪ್ರಕ್ರಿಯೆ: ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ, ಜನಪ್ರತಿನಿಧಿಗಳು ಒಂದಾದ ಆನಂತರ ಒಂದು ಕೆಲಸವನ್ನು ನಿರಂತರ ಮಾಡಬೇಕಾಗುತ್ತದೆ. ಆಗ ಮನಸ್ಸಿಗೆ ಸಮಾಧಾನ ಆಗುತ್ತದೆ. ಹಿಂದುಳಿದ ತಾಲೂಕನ್ನು ಅಭಿವೃದ್ಧಿ ಹೊಂದುತ್ತಿರುವ ತಾಲೂಕನ್ನಾಗಿ ಮಾಡಿರುವ ಸಮಾಧಾನ ನನಗೆ ಇದೆ ಎಂದು ಹೇಳಿದರು.ಪ್ರಮುಖರಾದ ಶ್ರೀಕಾಂತ ದುಂಡಿಗೌಡರ, ಶಿವಾನಂದ ಮ್ಯಾಗೇರಿ ಇತರರು ಇದ್ದರು.