ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬರೂ ಸೇವಾ ಮನೋಭಾನೆ ಬೆಳೆಸಿಕೊಂಡು ಉತ್ತಮ ಸಮಾಜ ಕಟ್ಟುವ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಕರೆ ನೀಡಿದರು.

ನಗರದ ಕೆ.ವಿ.ಶಂಕರಗೌಡ ಸಭಾ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದಿಂದ ನಡೆದ ಶಿಕ್ಷಕ, ಜನಪದ ಕಲಾ ಹಾಗೂ ಜನಪದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೋ ಮೂಲೆಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಮೌನ ಸಾಧಕರನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿರುವ ಕರ್ನಾಟಕ ಸಂಘದ ಸಾಧನೆ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಚಕ್ತಪಡಿಸಿದರು.

ಕರ್ನಾಟಕ ಸಂಘ ಕೇವಲ ಜಿಲ್ಲೆಯಲ್ಲಿನ ಸಾಧಕರನ್ನು ಗುರುತಿಸದೇ ರಾಜ್ಯದೆಲ್ಲೆಡೆ ಎಲ್ಲ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಂಘದ ಅಧ್ಯಕ್ಷರಾಗಿರುವ ಪ್ರೊ.ಜಯಪ್ರಕಾಶಗೌಡ ಅವರ ಆಲೋಚನೆ, ವಿಚಾರಧಾರೆಗಳಿಗೆ ಜನಮನ್ನಣೆ ಸಿಕ್ಕಿವೆ ಎಂದರು.

ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ಯಾವುದೇ ಕ್ಷೇತ್ರವಿರಲಿ. ಆಯಾ ವಿಷಯವನ್ನು ತೆಗೆದುಕೊಂಡು ವಿದ್ಯೆ ಧಾರೆಯೆರೆಯುವ ಶಿಕ್ಷಕರು ಹಾಗೂ ಗುರುಗಳ ಶ್ರಮ ಮರೆಯಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರೂ ಅರಿತು ಮುನ್ನಡೆಯಬೇಕು ಎಂದರು.


ಮೈಸೂರಿನ ಸಾಹಿತಿ ಪ್ರೊ.ನರಸಿಂಹೇಗೌಡ ನಾರಾಯಣಪುರ ಮಾತನಾಡಿ, ಕರ್ನಾಟಕ ಸಂಘದಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ಮೂಡಪಾಯ ಯಕ್ಷಗಾನದಲ್ಲಿ ಮೂಡಪಾಲಯ, ಯಕ್ಷಗಾನ ತತ್ವಪದ ಗಾಯನದಂತಹ ಹೊಸ ಕಲಾತ್ಮಕತೆಗಳನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವ ಜಯಪ್ರಕಾಶಗೌಡರ ಕಾರ್ಯದಿಂದ ಮಂಡ್ಯದ ಕರ್ನಾಟಕ ಹೆಸಲು ದೆಹಲಿ ಮಟ್ಟಕ್ಕೂ ಹಬ್ಬಿದೆ ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ಎನ್.ಜಿ.ಅಶೋಕ್ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಜವಾಬ್ದಾರಿಯುತವಾದದ್ದು. ವೃತ್ತಿ, ಪ್ರಶಸ್ತಿಗೆ ಆಯ್ಕೆ ಮಾಡಿದವರು, ಸಂಸ್ಥೆಗೆ ಆಭಾರಿಯಾಗಿದ್ದೇನೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳುವಂತಹ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತತ್ವಪದ ಕಲಾವಿದೆ ಬೇವಿನಹಳ್ಳಿ ನಂಜಮ್ಮ (ಚನ್ನಮ್ಮ ಕರಿಯಪ್ಪ ಕಲಾವಿದೆ), ತತ್ವಪದ ಕಲಾವಿದ ಕೀಲಾರ ಸಿ.ಆರ್. ಸಂಜೀವಯ್ಯ (ಗುಣಸಾಗರಿ ಸಿ.ನಾಗರಾಜು ಜನಪದ ಕಲಾವಿದೆ), ಹೊನ್ನನಾಯಕನಹಳ್ಳಿ ಶಿಕ್ಷಕ ಎನ್.ಜಿ.ಅಶೋಕ್ (ಎಂ. ಸಿದ್ದರಾಮು ವಿಜ್ಞಾನ ಶಿಕ್ಷಕ), ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಜಾನಪದ ಕಲಾವಿದ ಉಮೇಶ್ ತೆಂಕನಹಳ್ಳಿ ಅವರಿಗೆ ಸಿ. ನಾಗರಾಜು ಜನಪದ ಕಲಾವಿದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಉಪನ್ಯಾಸಕ ಎಸ್.ಸುದೀಪ್‌ಕುಮಾರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್‌ಕುಮಾರ್, ಕಾರ್ಯದರ್ಶಿ ಚಂದಗಾಲು ಲೋಕೇಶ್, ನಿರ್ದೇಶಕ ಕೋಣನಹಳ್ಳಿ ಜಯರಾಂ ಭಾಗವಹಿಸಿದ್ದರು.