ಪ್ರತಿಯೊಬ್ಬರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು: ಡಿ.ನಾಗೇಶ ಗೌಡ ಕರೆ

| Published : Aug 04 2024, 01:27 AM IST

ಸಾರಾಂಶ

ನರಸಿಂಹರಾಜಪುರ, ಪ್ರತಿಯೊಬ್ಬರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಿ.ನಾಗೇಶ್ ಗೌಡ ಕರೆ ನೀಡಿದರು.

ಸರ್ಕಾರಿ ಪ್ರಥಮ ದಜೆ ಕಾಲೇಜಿನಲ್ಲಿ ಪರಂಪರೆಯ ದಿನ ಆಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರತಿಯೊಬ್ಬರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಿ.ನಾಗೇಶ್ ಗೌಡ ಕರೆ ನೀಡಿದರು.ಶುಕ್ರವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪರಂಪರೆಯ ದಿನ ರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕಾರ್ಯಕ್ರಮದಲ್ಲೂ ದೀಪ ಬೆಳಗುವುದು ನಮ್ಮ ಸಂಸ್ಕೃತಿ ಒಂದು ಭಾಗ. ದೀಪ ಒಂದು ಚೇತನವಾಗಿದ್ದು ಜ್ಞಾನದ ದಿಕ್ಕನ್ನು ತೋರಿಸುತ್ತದೆ. ಭಾರತ ದೇಶ ಹಲವು ಭಾಷೆ, ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ ಹೊಂದಿರುವ ದೇಶ. ಇಲ್ಲಿ ಎಲ್ಲರೂ ಒಪ್ಪುವ, ಆರಾಧಿಸುವ, ಪ್ರತಿನಿಧಿಸುವ ಸಾಂಪ್ರಾದಾಯಿಕ ಆಹಾರ ಪದ್ಧತಿ, ವೈವಿದ್ಯತೆಯನ್ನು ಪ್ರದರ್ಶಿಸುವುದಕ್ಕಾಗಿಯೇ ಇಂದು ಪರಂಪರೆ ದಿನ ಆಚರಿಸಲಾಗುತ್ತದೆ ಎಂದರು.

ಭಾರತೀಯ ಸಂಸ್ಕೃತಿಗೆ ತನ್ನದೇ ಆದ ವಿಶೇಷತೆ ಇದೆ. ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ದೇಶಿ ಸಂಸ್ಕೃತಿ ನಾಶ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಇಂದಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ವೈವಾಹಿಕ ಜೀವನ ಪವಿತ್ರ ಎಂಬುದನ್ನೇ ಮರೆಯುತ್ತಿದ್ದಾರೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬ ಗಳಾಗಿ ಪರಿವರ್ತನೆಯಾಗುತ್ತಿದೆ. ಹಾಗಾಗಿ ದೇಶಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೇವಲ ವೇಷ ಭೂಷಣಗಳಲ್ಲಿ ಮಾತ್ರವಲ್ಲದೆ ಆಚಾರ, ವಿಚಾರಗಳನ್ನು ಸಹ ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕ ಮಂಜುನಾಥ್ ನಾಯಕ್ ಮಾತನಾಡಿ, ಭಾರತದ ಸಂಸ್ಕೃತಿ ರಾಷ್ಟ್ರೀಯತೆ , ವೇದಗಳಲ್ಲಿ ಅಡಗಿದೆ. ಕುಟುಂಬ, ಸಮುದಾಯ, ಸ್ನೇಹಿತರನ್ನು ಒಗ್ಗೂಡಿಸುವ ಶಕ್ತಿ ನಮ್ಮ ಆಹಾರ ಪದ್ಧತಿಯಲ್ಲಿದೆ. ದೇಶಿಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಬಿಡಬೇಕು. ಎಲ್ಲರೂ ಮನೆಯಲ್ಲಿಯೇ ತಯಾರಿಸುವ ರುಚಿಕರ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬರು ಭಾರತೀಯ ಸಂಸ್ಕೃತಿ, ಪರಂಪರೆ ಅರ್ಥಮಾಡಿ ಕೊಳ್ಳಬೇಕು. ಪ್ರಸ್ತುತ ಯುವಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಆಕರ್ಷಿತವಾಗುತ್ತಿರುವುದು ದುರಂತದ ಸಂಗತಿ ಯಾಗಿದೆ ಎಂದರು.

ಪ್ರಾಂಶುಪಾಲ ಧನಂಜಯ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ದಿನಕರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಲಕ್ಷ್ಮಣನಾಯಕ್, ವಿದ್ಯಾರ್ಥಿಗಳಾದ ಮೇರಿ ಡಿಸೋಜ, ಚಂದನ,ಗೌಸ್ಯಬಾನು, ಅನನ್ಯ, ಆಯುಷ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.