ಕನ್ನಡ ನಾಡು ನುಡಿ ರಕ್ಷಣೆಗೆ ಪ್ರತಿಯೊಬ್ಬರೂ ಹೋರಾಡಬೇಕು

| Published : Nov 11 2024, 12:52 AM IST / Updated: Nov 11 2024, 12:53 AM IST

ಸಾರಾಂಶ

ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಿ ಹೋರಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಕರೆ ನೀಡಿದರು. ಆಲೂರು ತಾಲೂಕಿನಲ್ಲಿಯೂ ಸಹ ಹಲವಾರು ಜ್ವಲಂತ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಟ್ಟಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಿ ಹೋರಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಕರೆ ನೀಡಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರವೇ ಪ್ರವೀಣ್ ಶೆಟ್ಟಿ ಬಣ ಕಳೆದ ಹಲವು ವರ್ಷಗಳಿಂದಲೂ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಾ ಬಂದಿದೆ. ಆಲೂರು ತಾಲೂಕಿನಲ್ಲಿಯೂ ಸಹ ಹಲವಾರು ಜ್ವಲಂತ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿ ಹೋರಾಟ ನಡೆಸಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಟ್ಟಿದೆ. ಆದರೂ ಸಹ ತಾಲೂಕಿನಲ್ಲಿ ಪ್ರಮುಖವಾಗಿ ಕಾಡಾನೆ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಅವುಗಳಿಗೆ ಇನ್ನೂ ಸಹ ಪರಿಹಾರ ದೊರಕಬೇಕಾಗಿದೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಹೋರಾಟ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಲು ಯಾವುದೇ ಸಮಯದಲ್ಲೂ ಸನ್ನದ್ಧರಾಗಿರಬೇಕು, ಯಾವುದೇ ಸರ್ಕಾರಗಳು ಬಂದರೂ ಸಹ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ ಹೊರತು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಇಂತಹ ಬೇಜವಾಬ್ದಾರಿತನದ ಜನಪ್ರತಿನಿಧಿಗಳಿಗೆ ಹೋರಾಟದ ಮೂಲಕ ಬಿಸಿ ಮುಟ್ಟಿಸಬೇಕೆಂದರು.

ತಾಲೂಕು ಅಧ್ಯಕ್ಷ ಎಚ್ ವಿ ರಾಘವೇಂದ್ರ ಮಾತನಾಡಿ, ರಾಜ್ಯಾದ್ಯಂತ ಅಕ್ರಮ ವಲಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇದರಲ್ಲಿ ಬಾಂಗ್ಲಾ ಹಾಗೂ ಪಾಕಿಸ್ತಾನದ ಪ್ರಜೆಗಳು ಸೇರಿರುವುದು ಆತಂಕಕಾರಿಯಾದ ವಿಷಯವಾಗಿದೆ. ತಾಲೂಕಿನಲ್ಲಿಯೂ ಸಹ ಸಾವಿರಾರು ಸಂಖ್ಯೆಯಲ್ಲಿ ಇಂತಹ ಅಕ್ರಮ ವಲಸಿಗರಿದ್ದು ಇವರಿಗೆ ನಮ್ಮವರೇ ಆಧಾರ್‌ ಕಾರ್ಡ್ ಮಾಡಿಕೊಡುತ್ತಿರುವು ದು ಖಂಡನೀಯ, ಇಂತಹವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದ ಅವರು, ರಾಷ್ಟ್ರೀಯ ಹೆದ್ದಾರಿ 75ರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಳ್ಳದೆ ಇದ್ದರೂ ಸಹ ಟೋಲ್ ಸಂಗ್ರಹಕ್ಕೆ ಬೈರಾಪುರ ಬಳಿ ಟೋಲ್ ಗೇಟ್ ನಿರ್ಮಾಣ ಮಾಡಿರುವುದು ಸರಿಯಾದ ಕ್ರಮವಲ್ಲ, ಅಲ್ಲದೆ ಆಲೂರು ತಾಲೂಕು ಕೇಂದ್ರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ವಾಹನಗಳು ಬಂದು ಹೋಗಲು ಸೂಕ್ತ ರಸ್ತೆ ನಿರ್ಮಾಣ ಮಾಡದೆ ಇರುವ ಕಾರಣ ಈಗಾಗಲೇ ಹಲವಾರು ಅಪಘಾತಗಳು ನಡೆದಿದ್ದು, ಹೆದ್ದಾರಿ ಪ್ರಾಧಿಕಾರದವರು ಸೂಕ್ತ ಪ್ಲೇ ಓವರ್ ಅಥವಾ ಅಂಡರ್ ಪಾಸ್ ರಸ್ತೆ ನಿರ್ಮಿಸದೆ ಹೋದರೆ ಯಾವುದೇ ಕಾರಣಕ್ಕೂ ಟೋಲ್ ಗೇಟ್ ಪ್ರಾರಂಭಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂಬಂಧವಾಗಿ ಶಾಸಕ ಸಿಮೆಂಟ್ ಮಂಜುರವರೊಂದಿಗೆ ಚರ್ಚಿಸಿದ್ದು, ಅವರು ಬೈರಾಪುರದಿಂದ ಆಲೂರು ಕೂಡಿಗೆವರೆಗೆ ಶೀಘ್ರ ದ್ವಿಪಥ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈಗಿರುವ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಿ ಭವಿಷ್ಯದ ದೃಷ್ಟಿಯಿಂದ ಈಗಿರುವ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಿ ವೈಜ್ಞಾನಿಕ ಮಾದರಿಯಲ್ಲಿ ಉತ್ತಮವಾದ ರಸ್ತೆ ನಿರ್ಮಾಣ ಮಾಡಬೇಕೆಂದು ತಾಲೂಕು ಘಟಕದ ವತಿಯಿಂದ ಒತ್ತಾಯಿಸಲಾಗುವುದೆಂದು ತಿಳಿಸಿದರು.ಆಲೂರು ಉಸ್ತುವಾರಿ ಮಧು ಪಿ ಗೌಡ, ಜಿಲ್ಲಾ ರೈತ ಘಟಕದ ಪ್ರವೀಣ್ ಕಾಳ ತಮ್ಮನಳ್ಳಿ, ಗೌರವ ಸಲಹೆಗಾರ ರಮೇಶ್, ಯುವ ಘಟಕದ ಅಧ್ಯಕ್ಷ ಅಶೋಕ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಂಜು, ನಗರ ಘಟಕದ ಅಧ್ಯಕ್ಷ ಕೀರ್ತಿ ಕಣಗಾಲ್ ಮತ್ತಿತರಿದ್ದರು.