ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಗತ್ತಿನ ಸಂಸ್ಕೃತಿ ನಾಯಕ ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.ಬಸವ ಜಯಂತಿ ನಿಮಿತ್ತ ರಾಜ್ಯಾದ್ಯಂತ 15 ಜಿಲ್ಲೆಗಳಲ್ಲಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ ಸಂಚರಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದಾಗ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬಸವಣ್ಣನವರು ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ. ಇಡೀ ಜಗತ್ತಿಗೆ ವಿಶ್ವ ಗುರು ಆದವರು. ಒಬ್ಬ ಚಿಂತಕರಾಗಿ, ವಚನಕಾರರಾಗಿ 12 ನೇ ಶತಮಾನದಿಂದ ಇಲ್ಲಿಯವರೆಗೂ ಅವರು ಸಮಾಜಕ್ಕೆ ನೀಡಿರುವ ಬೋಧನೆಗಳು, ಚಿಂತನೆಗಳು, ಮೌಲ್ಯಗಳು ಹಾಗೂ ಆದರ್ಶಗಳು ನಿಜಕ್ಕೂ ಅಪಾರ ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದರು.ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಮಹತ್ತರ ಬದಲಾವಣೆಯ ಆಶಯವನ್ನು ಕಂಡಂತಹ ಮಹಾನ್ ಮಾನವತವಾದಿ ಬಸವಣ್ಣರವರು. ಇಂದು ಅವರ ಜಯಂತಿ ಅಂಗವಾಗಿ ಸರ್ಕಾರ ಕೈಗೊಂಡಿರುವ ಅನುಭವ ಮಂಟಪ - ಬಸವಾದಿ ಶರಣರ ವೈಭವ ರಥಯಾತ್ರೆ ಯಶಸ್ವಿಯಾಗಲಿ. ಸರ್ಕಾರದ ಆದೇಶದಂತೆ ಬಸವಣ್ಣವರ ಚಿಂತನೆ ಮತ್ತು ಆದರ್ಶಗಳ ಬಗ್ಗೆ ಮುಂದಿನ ಪೀಳಿಗೆಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಾದ ಶಿವಕುಮಾರ್ ಬಿರಾದಾರ್, ರೆಡ್ ಕ್ರಾಸ್ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಸಮುದಾಯ ಮುಖಂಡರಾದ ಎಲ್.ಸಂದೇಶ್, ರಂಗಸ್ವಾಮಿ, ಎಂ.ವಿ.ಧರಣೇಂದ್ರಯ್ಯ, ಮಂಜುನಾಥ ಬೆಟ್ಟಹಳ್ಳಿ, ರುದ್ರಸ್ವಾಮಿ, ಕೆಂಪಯ್ಯ ಸೇರಿದಂತೆ ಇನ್ನಿತರರಿದ್ದರು.
ಏ.30 ರಂದು ವಿಶ್ವಗುರು ಬಸವೇಶ್ವರರ ಜಯಂತಿಮಂಡ್ಯ: ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಏ.30 ರಂದು ಶ್ರೀ ವಿಶ್ವಗುರು ಬಸವೆಶ್ವರರ ಜಯಂತಿಯನ್ನುಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾ ಬಸವ ಜಯಂತಿ ಸಮಿತಿ ಹಾಗೂ ಅಖಿಲಾ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸುವರು. ಬಿ.ಜಿ.ಪುರ ಹೊರಮಠದ ಶ್ರೀಚಂದ್ರಶೇಖರ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಮ್ಮುಖ ವಹಿಸಲಿದ್ದಾರೆ.
ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು, ಡೀಸಿ, ಜಿಪಂ ಸಿಇಒ, ಎಸ್ಪಿ, ಎಡೀಸಿ ಸೇರಿದಂತೆ ಅಧಿಕಾರಿಗಳು ಭಾಗವಹಿಸುವರು. ನಿವೃತ್ತ ಸಂಸ್ಕೃತ ಉಪನ್ಯಾಸಕ ಡಾ.ಎಸ್. ಶಿವರಾಜಪ್ಪ ವಿಶ್ವಗುರು ಬಸವೆಶ್ವರರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.