ಸಾರಾಂಶ
ಆಹಾರ ಪದಾರ್ಥಗಳಿಗೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸುವುದರಿಂದ ಮಾನವ ಕಾಯಿಲೆಗಳಿಗೆ ತುತ್ತಾಗುತ್ತಾರೆ. ನಗರ ಪ್ರದೇಶಗಳಲ್ಲಿ ವಾಕ್, ಜಿಮ್, ವ್ಯಾಯಾಮ, ಯೋಗಾಸನ ಮಾಡುವುದರ ಮೂಲಕ ಆರೋಗ್ಯ ಕಾಳಜಿ ವಹಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕಡೆ ಗಮನವನ್ನು ಹರಿಸುವುದು ಕಡಿಮೆಯಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಕ್ಕರೆ ಕಾಯಿಲೆ, ಅಧಿಕ ರಕ್ತ ಒತ್ತಡ ಹಾಗೂ ಇತರೆ ಕಾಯಿಲೆಗಳು ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಪ್ರತಿಯೊಬ್ಬರು ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕ ಎಚ್.ಟಿ.ಮಂಜು ಸಲಹೆ ನೀಡಿದರು.ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಮನೆಗೊಬ್ಬರ ಬಳಸಿ ಆಹಾರ ಪದಾರ್ಥ ಬೆಳೆದು ತಿನ್ನುತ್ತಿದ್ದರು. ಇದರಿಂದ ರೋಗಗಳು ಮನುಷ್ಯನ ಹತ್ತಿರಕ್ಕೆ ಸುಳಿಯುತ್ತಿರಲಿಲ್ಲ ಎಂದರು.
ಯಾವುದೇ ಸಣ್ಣ ಪುಟ್ಟ ರೋಗಗಳು ಎದುರಾದರೂ ಮನೆಯಲ್ಲಿಯೇ ಗುಣಮುಖರಾಗಲು ಸಂಬಂಧಿಸಿದ ಕಾಯಿಲೆಗಳಿಗೆ ಕಷಾಯವನ್ನು ಸೇವಿಸುತ್ತಿದ್ದರು. ಇತ್ತಿಚಿನ ದಿನಗಳಲ್ಲಿ ನಮ್ಮ ಜನರು ಪಾಶ್ಚಿಮಾತ್ಯ ರಾಷ್ಟಗಳ ಆಹಾರ ಜೀವನ ಶೈಲಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಆಹಾರ ಪದಾರ್ಥಗಳಿಗೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸುವುದರಿಂದ ಮಾನವ ಕಾಯಿಲೆಗಳಿಗೆ ತುತ್ತಾಗುತ್ತಾರೆ. ನಗರ ಪ್ರದೇಶಗಳಲ್ಲಿ ವಾಕ್, ಜಿಮ್, ವ್ಯಾಯಾಮ, ಯೋಗಾಸನ ಮಾಡುವುದರ ಮೂಲಕ ಆರೋಗ್ಯ ಕಾಳಜಿ ವಹಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕಡೆ ಗಮನವನ್ನು ಹರಿಸುವುದು ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಾಳಜಿಯನ್ನು ವಹಿಸಬೇಕು. ಆಗಾಗ್ಗೆ ಆರೋಗ್ಯ ತಪಾಸಣಾ ಮಾಡಿಸಿ ಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ಇದೇ ವೇಳೆ ಶಾಲೆಗೆ ಹಾಗೂ ಆಸ್ಪತ್ರೆಯ ನಿರ್ಮಾಣಕ್ಕೆ ಜಾಗವನ್ನು ನೀಡಿದ ದಾನಿಗಳಾದ ನೂರುನ್ನಿಸಾ ಕುಟುಂಬವನ್ನು ಶಾಸಕ ಎಚ್.ಟಿ. ಮಂಜು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್, ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಶಿಧರ್, ಸಿಂಧಘಟ್ಟ ಗ್ರಾಪಂ ಅಧ್ಯಕ್ಷೆ ದಿವ್ಯಗಿರೀಶ್, ಜಿಲ್ಲಾ ಆರೋಗ್ಯ ಸಂಚಾಲಕ ಕುಮಾರ್, ಉಪಾಧ್ಯಕ್ಷ ನಂಜಪ್ಪ, ಸದಸ್ಯರಾದ ನವೀನಕುಮಾರ್, ಆಶಾ ಸೋಮಶೇಖರ್, ಸುಮಲತಾ, ರೂಪ,ಲಾವಣ್ಯ, ಶಾಂಭವಿ, ಜ್ಯೋತಿ, ಪಿಡಿಒ ವಾಣಿ, ಶಾಸಕ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಹರಿಕೃಷ್ಣ, ಗಿರೀಶ್ ಸೇರಿದಂತೆ ಇತರರು ಹಾಜರಿದ್ದರು.