ಸಾರಾಂಶ
ಹೊಸಕೋಟೆ: ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವೆ ಪಡೆಯುವುದು ದುಬಾರಿಯಾಗಿದೆ, ಇವರೆಡು ಹೊರೆಯಾಗದಂತೆ ಕಡ್ಡಾಯವಾಗಿ ಸಿಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ ದಕ್ಷಿಣ್ ಫೌಂಡ್ರಿ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಶಾಲೆಯಲ್ಲಿರುವ ಶಿಕ್ಷಕರು ಕೆನೆಯ ಪದರದಂತೆ ಎಂದು ನಾನು ಭಾವಿಸಿದ್ದೇನೆ. ಅದರಂತೆ ನೀವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯಷ್ಟೇ ಗುಣಮಟ್ಟದ ಶಿಕ್ಷಣವನ್ನು ಕಲಿಸುವುದರ ಮೂಲಕ ಪೋಷಕರ ಮನಸ್ಸನ್ನು ಗೆದ್ದರೆ ದಾಖಲಾತಿ ಪ್ರಮಾಣ ತನ್ನಿಂತಾನೆ ಹೆಚ್ಚಳವಾಗುತ್ತದೆ. ಆದ್ದರಿಂದ ಪ್ರತಿ ವರ್ಷ ಉತ್ತಮ ಫಲಿತಾಂಶ ಕೊಡುವ ಮೂಲಕ ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವನ್ನು ಪೋಷಕರಿಗೆ ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.
ಮೇ ದಕ್ಷಿಣ್ ಫೌಂಡ್ರಿ ಪ್ರೈವೇಟ್ ಲಿಮಿಟೆಡ್ ಕಂಪನಿ ಸಿಎಸ್‌ಆರ್ ಅನುದಾನದಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೀತಿಯಲ್ಲಿ ಕಳೆದ 10 ವರ್ಷಗಳಿಂದ ಶ್ರಮಿಸುತ್ತಿದೆ. 25 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ, ಅಂಗನವಾಡಿ, ಆರೋಗ್ಯ ಕೇಂದ್ರ, ರಂಗಮಂದಿರ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಯನ್ನು ದಕ್ಷಿಣ್ ಫೌಂಡ್ರಿ ಕಂಪನಿ ನೀಡಿರುವುದು ಪ್ರಶಂಸನೀಯ ಎಂದು ಹೇಳಿದರು.ಹೊಸಕೋಟೆ ತಾಲೂಕಿನಲ್ಲಿ ಶಿಕ್ಷಣ ಫೌಂಡೇಷನ್ 97 ಶಾಲೆಗಳನ್ನು ಗುರುತಿಸಿ ವಿಶೇಷ ಕಲಿಕಾ ಸಾಮಗ್ರಿ ಜೊತೆಗೆ ವಿವಿಧ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಫಲಿತಾಂಶದಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಮೇ ದಕ್ಷಿಣ್ ಫೌಂಡ್ರಿ ಪ್ರೈ ಲಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಶ್ವಜಿತ್ ಬ್ಯಾನರ್ಜಿ ಮಾತನಾಡಿ, ಸಮಾಜಮುಖಿ ಕೆಲಸ ಕಾರ್ಯಗಳಿಗೆ ನಮ್ಮ ಕಂಪನಿಯ ಸಿಎಸ್‌ಆರ್ ಅನುದಾನ ಸದ್ಬಳಕೆ ಮಾಡಿಕೊಳ್ಳಲು ನಾವು ಸದಾ ಸಿದ್ಧರಿದ್ದೇವೆ. ಪ್ರಮುಖವಾಗಿ ಗ್ರಾಮೀಣ ಶಾಲೆಗಳಿಗೆ ನೂತನ ಕೊಠಡಿಗಳನ್ನು ನಿರ್ಮಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವು ಒದಗಿಸಲು ಕಾರ್ಯ ನಿರಂತರವಾಗಿ ಮಾಡುತ್ತಿದ್ದೇವೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ಮಾತನಾಡಿ, ತಾಲೂಕಿನ ಸಾಕಷ್ಟು ಶಾಲೆಗಳಲ್ಲಿ ಹೊರರಾಜ್ಯದ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದು, ನಮ್ಮ ಗ್ರಾಮಗಳ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಸಿಎಸ್‌ಆರ್ ಅನುದಾನದಲ್ಲಿ ಜಿಕೆಬಿಎಂಎಸ್ ಶಾಲೆಯಲ್ಲಿ 1 ಕೋಟಿ ವೆಚ್ಚದಲ್ಲಿ 10 ಕೊಠಡಿ ಸೇರಿದಂತೆ ಬೀರಹಳ್ಳಿ, ನಂದಗುಡಿ, ಮಲ್ಲಿಮಾನಪುರ, ಪಿಲ್ಲಗುಂಪೆ ಗ್ರಾಮಗಳಲ್ಲಿ ಶಾಲೆಗಳನ್ನು ಸಿಎಸ್‌ಆರ್ ನಿಧಿಯಡಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಮೂಲ್ ನಿರ್ದೇಶಕ ಎಲ್‌ಅಂಡ್‌ಟಿ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ರಾಜ್ ಗೋಪಾಲ್, ಗ್ರಾಪಂ ಸದಸ್ಯ ಚಿಕ್ಕಹುಲ್ಲೂರು ಬಚ್ಚೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಗೋದ್ರೇಜ್ ಕಂಪನಿ ಮುಖ್ಯಸ್ಥ ಪ್ರಸಾದ್ ಪಾಟೀಲ್, ಮುಖಂಡ ಜಾನಕಿ ರಾಮರೆಡ್ಡಿ ಮತ್ತಿತರರು ಹಾಜರಿದ್ದರು.