ಸಾರಾಂಶ
ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ ಕರೆ ನೀಡಿದರು.
ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನರಸಿಂಹರಾಜಪುರ ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳು ಶ್ರದ್ಧೆ, ಏಕಾಗ್ರತೆಯಿಂದ ಶಿಕ್ಷಣ ಪಡೆಯಲು ಪೋಷಕರು ಹಾಗೂ ಶಿಕ್ಷಕರ ಸಹಕಾರ ಅಗತ್ಯವಾಗಿದೆ. ಸರ್ಕಾರ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಪ್ರತಿಭಾ ಕಾರಂಜಿ, ಕ್ರೀಡಾ ಕೂಟ ನಡೆಸುತ್ತಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ, ಕುಟುಂಬದ ಹಾಗೂ ದೇಶದ ಆಸ್ತಿಯಾಗಬೇಕು ಎಂದು ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಮುಖ್ಯ ಉದ್ದೇಶ. ಮಕ್ಕಳು ಶಿಕ್ಷಣದ ಜೊತೆಗೆ ವಿನಯವಂತರಾಗಿ, ಗುರು ಹಿರಿಯರಿಗೆ ಗೌರವ ಕೊಡುವ ಸತ್ಪ್ರಜೆಯಾಗಬೇಕು. ಈ ವರ್ಷದ ವಲಯಮಟ್ಟದ ಪ್ರತಿಭಾ ಕಾರಂಜಿ ಬಾಳೆಹೊನ್ನೂರಿನಿಂದ ಪ್ರಾರಂಭವಾಗಿದೆ. 9 ಕ್ಲಸ್ಟರ್ ಹಂತದಲ್ಲಿ ನಡೆದು ನಂತರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಯಲಿದೆ. ಪ್ರತಿಭಾ ಕಾರಂಜಿಗೆ ಸರ್ಕಾರ ನೀಡುವ ಅನುದಾನ ಕಡಿಮೆ ಇದ್ದರೂ ಗ್ರಾಮಸ್ಥರು ಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ಪ್ರತಿಭಾ ಕಾರಂಜಿ ನಡೆಸುತ್ತಾರೆ.ದಿಂಡಿನಕೊಪ್ಪ ಶಾಲೆಯಲ್ಲಿ 32 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ಉದ್ಘಾಟಿಸಿ ಮಾತನಾಡಿ, ನಾಗಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ 2 ಸರ್ಕಾರಿ ಶಾಲೆಗಳು ಮಾತ್ರ ಇದೆ. ಸರ್ಕಾರಿ ಶಾಲೆ ಎಂದು ಪೋಷಕರು ನಿರ್ಲಕ್ಷ್ಯ ಮಾಡದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವರು ಇಂದು ದೇಶದ ದೊಡ್ಡ, ದೊಡ್ಡ ಹುದ್ದೆಯಲ್ಲಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಸೋಲು ಅಥವಾ ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ದಿಂಡಿನಕೊಪ್ಪ ಶಾಲೆಗೆ ದಾಸೋಹ ಭವನ ಕಟ್ಟಿಸಲಾಗುತ್ತಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದರುಇದೇ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕಿ ರೂಪ, ದಾನಿಗಳಾದ ಪುರುಷೋತ್ತಮ್ ಭಟ್, ವಿಲ್ಸನ್, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.ನಂತರ 10 ಶಾಲೆಗಳಿಂದ ಬಂದ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸಭೆ ಅಧ್ಯಕ್ಷತೆಯನ್ನು ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷೆ ಆಶಾ, ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ತಾ. ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ನಂಜುಂಡಪ್ಪ, ರಾಜ್ಯ ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ಅಶೋಕ್, ಸಿಆರ್‌ಪಿ ದೇವರಾಜ್, ಶಿಕ್ಷಣ ಸಂಯೋಜಕ ರಂಗಪ್ಪ, ಸಂಗೀತ, ಪ್ರತಿಭಾ ಕಾರಂಜಿ ಆಯೋಜನೆ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಪಿಡಿಒ ಪ್ರೇಂ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಅರುಣಕುಮಾರಿ, ಪ್ರಾ.ಶಾ.ಶಿ.ಸಂಘದ ಆರ್.ನಾಗರಾಜ್, ತಿಮ್ಮೇಶ್, ಗ್ರಾಪಂ ಹಾಗೂ ಎಸ್ ಡಿಎಂಸಿ ಸದಸ್ಯರು ಇದ್ದರು.