ಸಾರಾಂಶ
ಅಜ್ಜರಕಾಡು ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಮ್ಮ ಆರೋಗ್ಯ ನಮ್ಮ ಹಕ್ಕು ಎಂಬ ಘೋಷಣೆಯಡಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಆರೋಗ್ಯವು ಅತಿ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ನಮ್ಮ ಆರೋಗ್ಯ ನಮ್ಮ ಹಕ್ಕು ಎಂಬುದು ಕೇವಲ ಘೋಷಣೆಯಾಗದೇ ಅದನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಅಶೋಕ್ ಕುಮಾರ್ ಎಚ್. ಹೇಳಿದರು.ಅವರು ಬುಧವಾರ ನಗರದ ಅಜ್ಜರಕಾಡು ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಮ್ಮ ಆರೋಗ್ಯ ನಮ್ಮ ಹಕ್ಕು ಎಂಬ ಘೋಷಣೆಯಡಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಜನರಲ್ಲಿ ಆರೋಗ್ಯದ ಕುರಿತು ಅರಿವಿನ ಕೊರತೆಯಿದೆ. ಈ ನಿಟ್ಟಿನಲ್ಲಿ ಆರೋಗ್ಯ ಶಿಕ್ಷಣ ಕುರಿತ ಮಾಹಿತಿಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ನೀಡಬೇಕು ಎಂದರು.ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ಆರೋಗ್ಯ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಸಂಚಾಲಕಿ ಡಾ. ದಿವ್ಯಾ ಎಂ.ಎಸ್. ಅವರು ಉತ್ತಮ ಆರೋಗ್ಯಕರ ಜೀವನ ನಡೆಸುವ ಕುರಿತು ಮಾಹಿತಿ ನೀಡಿದರು.ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ನಿಕೇತನ ನಿರೂಪಿಸಿದರು. ಮಾಜಿ ಖಜಾಂಚಿ ಚಂದ್ರಶೇಖರ್ ವಂದಿಸಿದರು.