ಕನ್ನಡ ಭಾಷಾಭಿಮಾನ, ಭಾಷಾ ಪ್ರಜ್ಞೆ ಎಲ್ಲರಲ್ಲೂ ಇರಬೇಕು

| Published : Nov 08 2024, 12:31 AM IST

ಸಾರಾಂಶ

ಹಿರಿಯೂರು : ಅನ್ಯ ಭಾಷೆಗಳು ಸಾರ್ವಭೌಮತ್ವ ಸಾಧಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಭಾಷೆಯ ಮೇಲೆ ಪ್ರೀತಿ ಮತ್ತು ಭಾಷಾ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ಹಿರಿಯೂರು : ಅನ್ಯ ಭಾಷೆಗಳು ಸಾರ್ವಭೌಮತ್ವ ಸಾಧಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಭಾಷೆಯ ಮೇಲೆ ಪ್ರೀತಿ ಮತ್ತು ಭಾಷಾ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಪ್ರಜ್ಞೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಿಗೆ ಅಭಿಮಾನ ಕಡಿಮೆಯಾಗುತ್ತಿದ್ದು, ಇದು ಭಾಷೆಯ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ. ರಾಜ್ಯದಲ್ಲಿ ಕನ್ನಡಿಗರಿಗಿಂತ ಅನ್ಯಭಾಷಿಕರೇ ಹೆಚ್ಚಾಗುತ್ತಿದ್ದು, ಅವರಿಗೆ ಕನ್ನಡ ಭಾಷೆ ಕಲಿಸಲು ಸರ್ಕಾರ ಪ್ರಯತ್ನಿಸಬೇಕು. ಅವರೂ ಸಹ ಕನ್ನಡ ಕಲಿಯಲು ಆಸಕ್ತಿ ತೋರಬೇಕು. ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಜೊತೆಗೆ ಕನ್ನಡ ಭಾಷೆಯನ್ನೇ ಬಳಕೆ ಮಾಡುವಂತೆ ಪ್ರೇರೇಪಿಸಬೇಕು. ರಾಜ್ಯದ ಪ್ರತಿಯೊಂದು ಕಚೇರಿಯಲ್ಲೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಆಗ ಮಾತ್ರ ಕನ್ನಡ ಭಾಷೆಯ ಉಳಿವು ಮತ್ತು ಭಾಷೆಯ ಬೆಳವಣಿಗೆ ಸಾಧ್ಯ ಎoದರು.

ಕರವೇ ಗೌರವಾಧ್ಯಕ್ಷ ಗೋ.ಬಸವರಾಜ್ ಮಾತನಾಡಿ, ಕನ್ನಡ ಭಾಷೆಯು ಅಳಿವಿನ ಅಂಚಿನಲ್ಲಿದ್ದು, ರಾಜ್ಯದಲ್ಲಿ ಕನ್ನಡಪರ ಹೋರಾಟಗಳಿಲ್ಲದಿದ್ದರೆ ಕನ್ನಡ ಭಾಷೆಗೆ ಸಿಗಬೇಕಾದ ಸ್ಥಾನಮಾನ, ಗೌರವ ಸಿಗಲು ಸಾಧ್ಯವಿಲ್ಲ ಎಂದರು.

ಪ್ರಾಂಶುಪಾಲ ಡಾ.ಆರ್.ಮಹೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಎಸ್.ನಾಯ್ಕರ್, ಬಿಆರ್ ಸಿ ತಿಪ್ಪೇರುದ್ರಪ್ಪ, ಪ್ರಾಂಶುಪಾಲ ರಾಮಚಂದ್ರಪ್ಪ, ಮಹಾಸ್ವಾಮಿ, ರಕ್ಷಣಾ ವೇದಿಕೆ ಅಧ್ಯಕ್ಷ ರಾಮಕೃಷ್ಣಪ್ಪ , ದಾದಾಪೀರ್, ಸಹ ಶಿಕ್ಷಕ ವಿಜಯ್ ಕುಮಾರ್, ಶಿಕ್ಷಕ ದೇವರಾಜ್ ಇದ್ದರು.