ಡೆಂಘೀ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು-ಶಾಸಕ ಮಾನೆ

| Published : Jun 12 2024, 12:37 AM IST

ಡೆಂಘೀ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಮಂಗಳವಾರ ಗೂಗಲ್ ಮೀಟ್ ಮೂಲಕ ತಾಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಸಭೆ ನಡೆಸಿ, ಅಗತ್ಯ ಸಲಹೆ ನೀಡಿದರು.

ಹಾನಗಲ್ಲ: ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಮಂಗಳವಾರ ಗೂಗಲ್ ಮೀಟ್ ಮೂಲಕ ತಾಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಸಭೆ ನಡೆಸಿ, ಅಗತ್ಯ ಸಲಹೆ ನೀಡಿದರು.ತಾಲೂಕಿನಲ್ಲಿ ಡೆಂಘೀ ಹರಡುವಿಕೆಯ ಪ್ರಮಾಣ ನಿಯಂತ್ರಣದಲ್ಲಿದೆ. ಅನಗತ್ಯ ಭಯ ಮತ್ತು ಆತಂಕಕ್ಕೆ ಒಳಗಾವುದು ಅಗತ್ಯವಿಲ್ಲ. ಆದರೂ ಕೂಡ ನಿರ್ಲಕ್ಷ್ಯ ವಹಿಸುವುದು ಸಲ್ಲದು. ಹಾನಗಲ್ ಪುರಸಭೆ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಫಾಗಿಂಗ್ ಹಾಗೂ ಕೀಟನಾಶಕ ಔಷಧಿ ಸಿಂಪಡಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಶ್ರೀನಿವಾಸ ಮಾನೆ, ಆದಷ್ಟು ಪ್ರತಿ ಗ್ರಾಪಂ ವ್ಯಾಪ್ತಿಗಳಲ್ಲಿ ಸಮುದಾಯ ಸಭೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳ ಮೂಲಕ ಪಾಲಕರಿಗೆ ತಿಳಿವಳಿಕೆ ನೀಡಬೇಕು. ಕುಡಿಯುವ ನೀರು ಮತ್ತು ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದಂತೆ ಕಿವಿಮಾತು ಹೇಳಿ ಎಂದು ಸೂಚಿಸಿದರು.ಎಲ್ಲರೂ ಜೊತೆಗೂಡಿ ಡೆಂಘೀ ನಿಯಂತ್ರಣದಲ್ಲಿ ಕೈ ಜೋಡಿಸಬೇಕು. ಶಾಲಾವಧಿಯ ನಂತರ ಎಸ್‌ಡಿಎಂಸಿ ಮತ್ತು ಗ್ರಾಪಂ ಸದಸ್ಯರೊಂದಿಗೆ ಸಭೆ ನಡೆಸಿ ಡೆಂಘೀ ಹರಡುವಿಕೆ ತಡೆಗಟ್ಟುವ ಬಗ್ಗೆ ಸಮಾಲೋಚನೆ ನಡೆಸಬೇಕು. ಮಳೆ ಮತ್ತು ಗಲೀಜು ನೀರು ಹರಿದು ಹೋಗದೇ ನಿಂತಲ್ಲೇ ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗಿ ಸಮಸ್ಯೆ ತಂದೊಡ್ಡಲಿದ್ದು, ಈ ಬಗೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಎಂದು ಶಾಸಕ ಮಾನೆ ಕಿವಿಮಾತು ಹೇಳಿದರು. ತಹಸೀಲ್ದಾರ್ ರೇಣುಕಾ ಎಸ್. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಲಿಂಗರಾಜ ಎಸ್., ಬಿಇಒ ವಿ.ವಿ. ಸಾಲಿಮಠ ಸೇರಿದಂತೆ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಗೂಗಲ್ ಮೀಟ್‌ನಲ್ಲಿ ಪಾಲ್ಗೊಂಡಿದ್ದರು.ಹಾನಗಲ್ ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ಒಟ್ಟು ೧೨ ಡೆಂಘೀ ಪ್ರಕರಣಗಳು ವರದಿಯಾಗಿವೆ. ಡೆಂಘೀ ಪೀಡಿತರೆಲ್ಲರೂ ಗುಣಮುಖರಾಗುತ್ತಿದ್ದಾರೆ. ಪ್ರಕರಣಗಳು ಹರಡದಂತೆ ಮುಂಜಾಗ್ರತೆ ಕೈಗೊಳ್ಳಬೇಕಿದೆ. ಅನಗತ್ಯವಾಗಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿತ್ಯವೂ ಈ ಕುರಿತು ಮಾಹಿತಿ ಪಡೆಯಲಾಗುತ್ತಿದೆ ಶಾಸಕ ಶ್ರೀನಿವಾಸ ಮಾನೆ ಹೇಳಿದರು.