ಬಾಗೇಪಲ್ಲಿ ಭಾಗ್ಯನಗರವಾಗಲು ಪ್ರತಿಯೊಬ್ಬರೂ ಕೈ ಜೋಡಿಸಿ: ಹನುಮಂತರೆಡ್ಡಿ

| Published : Jan 29 2025, 01:32 AM IST

ಬಾಗೇಪಲ್ಲಿ ಭಾಗ್ಯನಗರವಾಗಲು ಪ್ರತಿಯೊಬ್ಬರೂ ಕೈ ಜೋಡಿಸಿ: ಹನುಮಂತರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಲಾ ಸಂಘದ ಜವಾಬ್ದಾರಿಯನ್ನು ತೆಗೆದುಕೊಂಡು ಹೆಚ್ಚು ಹೆಚ್ಚು ಕನ್ನಡ ಪರ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರ ಮೂಲಕ ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಇಲ್ಲಿನ ಕನ್ನಡಪರ ಸಂಘಟನೆಗಳು ಕನ್ನಡ ಭಾಷೆ, ನೆಲ-ಜಲಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸಿ ಸರ್ಕಾರಗಳ ಗಮನ ಸೆಳೆಯುತ್ತಿವೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿಯಲ್ಲಿ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದರೂ ಸಹ ಕನ್ನಡ ಭಾಷೆ, ನುಡಿ, ನೆಲ,ಜಲಗಳ ಜೊತೆಗೆ ಕನ್ನಡತನಕ್ಕೆ ಯಾವುದೇ ಧಕ್ಕೆಯಾಗದಂತೆ ಇಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕನ್ನಡ ಕಲಾಸಂಘ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅಲ್ಲದೆ ಡಾ.ರಾಜ್‍ಕುಮಾರ್, ಉದಯಕುಮಾರ್, ವಿಷ್ಣುವರ್ಧನ್ ಮತ್ತಿತರ ಕನ್ನಡ ಮೇರುನಟರನ್ನು ಬಾಗೇಪಲ್ಲಿಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸಿದ ಇತಿಹಾಸವಿದೆ ಎಂದರು.

ಈಗ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಲಾ ಸಂಘದ ಜವಾಬ್ದಾರಿಯನ್ನು ತೆಗೆದುಕೊಂಡು ಹೆಚ್ಚು ಹೆಚ್ಚು ಕನ್ನಡ ಪರ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರ ಮೂಲಕ ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಇಲ್ಲಿನ ಕನ್ನಡಪರ ಸಂಘಟನೆಗಳು ಕನ್ನಡ ಭಾಷೆ, ನೆಲ-ಜಲಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸಿ ಸರ್ಕಾರಗಳ ಗಮನ ಸೆಳೆಯುತ್ತಿವೆ. ಈ ತಾಲೂಕಿನ ಬಹುದಿನಗಳ ಬೇಡಿಕೆಯಂತೆ ಬಾಗೇಪಲ್ಲಿ ಹೆಸರನ್ನು ಬದಲಿಸಿ ಭಾಗ್ಯನಗರವನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ಹಾಗೂ ಅಭಾಸಾಪ ಅಧ್ಯಕ್ಷೆ ರಾಧಾಮಣಿ ಮಾತನಾಡಿ, ಬಾಗೇಪಲ್ಲಿಯಲ್ಲಿ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂತೋಷದ ವಿಚಾರ. ಕವಿಗಳು ಮತ್ತು ಕವಿತೆಗಳ ಅವಲೋಕನವನ್ನು ಮಾಡುವ ಅವಕಾಶ ನನಗೆ ಸಿಕ್ಕಿರುವುದು ಪುಣ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅತಿ ಶೀಘ್ರದಲ್ಲಿಯೇ ವಾರದ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ತೀರ್ಮಾನ ತೆಗೆದುಕೊಂಡು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಗೌರವ ಕೋಶಾಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್ ಮಾತನಾಡಿದರು. ಕವಿಗೋಷ್ಠಿಯಲ್ಲಿ 20 ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ನಂತರ ಅಭಿನಂದನಾ ಪತ್ರಗಳನ್ನು ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ಕಸಾಪ ಗೌರವ ಕಾರ್ಯದರ್ಶಿಗಳಾದ ಎನ್.ಶಿವಪ್ಪ, ಶ್ರೀನಿವಾಸ್ ಬಾಣಾಲಪಲ್ಲಿ, ಕನ್ನಡ ಕಲಾ ಸಂಘದ ಅಧ್ಯಕ್ಷ ಪಿ.ಎಸ್.ರಾಜೇಶ್, ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್, ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ಕಜಾಪ ಅಧ್ಯಕ್ಷ ಅಂಜಿನಪ್ಪ, ಸುಕನ್ಯ, ರಾಜರಾಜೇಶ್ವರಿ, ಪ್ರಭಾ ನಾಗರಾಜ್, ಪ್ರೊ.ವೈ.ನಾರಾಯಣ, ಜಿ.ವಿ.ಚಂದ್ರಶೇಖರ್, ಡಿ.ಎನ್.ನಾಗರಾಜ, ಡಿ.ಪಿ.ಲಕ್ಷ್ಮೀಪತಿ ಮತ್ತಿತರರು ಇದ್ದರು.