ಸಾರಾಂಶ
ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಶ್ರದ್ದಾಂಜಲಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ಉಗ್ರರು ದಾಳಿ ಮಾಡಿ ಕೊಂದು ಹಾಕಿರುವ ದುಷ್ಕೃತ್ಯವನ್ನು ರಾಜಕಾರಣ ಬಿಟ್ಟು ಪ್ರತಿಯೊಬ್ಬರು ಖಂಡಿಸಬೇಕು ಎಂದು ಶಿವಮೊಗ್ಗ ಭದ್ರಾ ಕಾಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಹೇಳಿದರು.
ಶುಕ್ರವಾರ ಸಂಜೆ ಡಾ.ಅಂಬೇಡ್ಕರ್ ವೃತ್ತದಲ್ಲಿ ಪಹಲ್ಗಾಮ್ ನಲ್ಲಿ ಉಗ್ರರದಾಳಿಗೆ ಬಲಿಯಾದವರಿಗೆ ತಾಲೂಕು ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಮೇಣದ ಬತ್ತಿ ಮೆರವಣಿಗೆ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಉಗ್ರರ ದಾಳಿಗೆ ಬಲಿಯಾದವರಿಗೆ ದೇಶದಾದ್ಯಂತ ಶ್ರದ್ಧಾಂಜಲಿ ಸಭೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು ಜೀವ ಕಳೆದು ಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಿ ಇಡೀ ದೇಶ ನಿಮ್ಮ ಜೊತೆ ಇದೆ ಎಂದು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ.ಭಯೋತ್ಪಾದಕರ ಈ ಹೇಯ ಕೃತ್ಯವಾಗಿದೆ. ಅಮಾಯಕರ ಮೇಲೆ ದಾಳಿ ಮಾಡಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಉಗ್ರಗಾಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ದೇಶದಲ್ಲಿ ಮುಂದೆ ಇಂತಹ ಕೃತ್ಯ ನಡೆಯದಂತೆ ಭಯೋತ್ಪಾದನೆ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಯಾವುದೇ ಕಾರಣಕ್ಕೂ ಭಾವನೆ ಕೆರಳಿಸುವುದಕ್ಕೆ, ಟೀಕೆಗಳನ್ನು ಮಾಡಲು ಬಳಸಿಕೊಳ್ಳದೆ ಭಾರತೀಯರೆಲ್ಲರೂ ಈ ಘಟನೆಯನ್ನು ಖಂಡಿಸಬೇಕು. ನಾಗರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉಗ್ರಗ್ರಾಮಿಗಳಿಗೆ ಪ್ರಧಾನಿ ಕಠಿಣ ಶಿಕ್ಷೆ ಕೊಡಿಸಿ ನಾಗರಿಕರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ,ಕಾಶ್ಮೀರದಲ್ಲಿ ಉಗ್ರಗಾಮಿಗಳು ನಡೆಸಿರುವ ದಾಳಿಯನ್ನು ಎಲ್ಲಾ ಜನಾಂಗದವರು ಖಂಡಿಸಿದ್ದಾರೆ. ಉಗ್ರಗಾಮಿಗಳ ದಾಳಿ ಹಿಂದೆ ಪಾಕಿಸ್ಥಾನದ ಪ್ರಜೋದನೆ ಯಿರುವುದು ಕಂಡು ಬರುತ್ತಿದೆ. ರಾಜಕೀಯ ಹೊರತು ಪಡಿಸಿ ಕೇಂದ್ರ ಸರ್ಕಾರದ ಕ್ರಮಕ್ಕೆ ಎಲ್ಲರೂ ಬದ್ಧವಾಗಿರಬೇಕು. ಉಗ್ರರದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಎನ್.ಆರ್.ಪುರದ ಅಗ್ರಹಾರದಲ್ಲಿ ಬಾಲ್ಯ ಕಳೆದವರು. ಕ್ಷೇತ್ರದ ಜನರ ಪರವಾಗಿ ಶಾಸಕ ಟಿ.ಡಿ.ರಾಜೇಗೌಡರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮಂಜುನಾಥ್ ರಾವ್ ಪುತ್ರನ ವಿದ್ಯಾಭ್ಯಾಸಕ್ಕೆ 1 ಲಕ್ಷ ನೆರವಿನ ಹಸ್ತ ಚಾಚಿದ್ದಾರೆ. ಜಾತಿ, ಧರ್ಮ, ಪಕ್ಷ ರಾಜಕಾರಣವನ್ನು ಬಿಟ್ಟು ಭಯೋತ್ಪಾದನೆ ನಿರ್ಮೂಲನೆ ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು.ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ದೇಶದ ಭದ್ರತೆ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ತಾಲೂಕು ಯುವಕಾಂಗ್ರೆಸ್ ಘಟಕದ ಅಧ್ಯಕ್ಷ ರತನ್ ಗೌಡ, ಉಪಾಧ್ಯಕ್ಷ ದೇವಂತ್ ಗೌಡ, ಕೆಡಿಪಿ ಸದ್ಯ ಕೆ.ವಿ.ಸಾಜು ಮಾತನಾಡಿದರು. ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಬಿ.ವಿ.ಉಪೇಂದ್ರ, ಅಂಜುಮ್, ಬೆನ್ನಿ, ರಮೇಶ್, ಸೈಯದ್ ವಸೀಂ, ಸುರಯ್ಯಬಾನು, ಮುನಾವರಪಾಷ, ಅನಿದ್, ನಹೀಂ ಮತ್ತಿತರರಿದ್ದರು.