ಪ್ರತಿಯೊಬ್ಬರು ಸುಂದರ ಬದುಕು ಕಟ್ಟಿಕೊಳ್ಳಬೇಕು: ಡಿ.ಎಂ.ಚೇತನಾ

| Published : Feb 24 2025, 12:31 AM IST

ಸಾರಾಂಶ

ಮಹಿಳೆಯರು ಸಂಬಂಧಗಳ ಮೌಲ್ಯವನ್ನು ಉಳಿಸಿ ದೇಶದ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಮಾದರಿಯಾಗಿ ಬದುಕಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕೊಡಿಸಿ ಸರಿಯಾದ ಮಾರ್ಗ ತೋರಿಸಿದರೇ ಭವಿಷ್ಯದಲ್ಲಿ ಮಕ್ಕಳೇ ಆಸ್ತಿಯಾಗಿ ತಂದೆ ತಾಯಿಗಳನ್ನು ಸಾಕುತ್ತಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರತಿಯೊಬ್ಬರು ಬದುಕಿನ ಜೊತೆಗೆ ಸಂಘಗಳನ್ನು ಸ್ಥಾಪಿಸಿ ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಅಭಿವೃದ್ಧಿ ಜೊತೆಗೆ ಮನಸ್ಸನ್ನು ಪರಿರ್ತನೆ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ನಿರ್ದೇಶಕಿ ಡಿ.ಎಂ.ಚೇತನ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸಂಬಂಧಗಳ ಮೌಲ್ಯವನ್ನು ಉಳಿಸಿ ದೇಶದ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಮಾದರಿಯಾಗಿ ಬದುಕಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕೊಡಿಸಿ ಸರಿಯಾದ ಮಾರ್ಗ ತೋರಿಸಿದರೇ ಭವಿಷ್ಯದಲ್ಲಿ ಮಕ್ಕಳೇ ಆಸ್ತಿಯಾಗಿ ತಂದೆ ತಾಯಿಗಳನ್ನು ಸಾಕುತ್ತಾರೆ ಎಂದು ಸಲಹೆ ನೀಡಿದರು.

ಕಳೆದ 12 ವರ್ಷಗಳಿಂದ ಸಂಸ್ಥೆ ಸೇವೆ ಸಲ್ಲಿಸುತ್ತಾ ಬರುತ್ತಿದೆ. 2566 ಸಂಘಗಳು, 22199 ಮಂದಿ ಸದಸ್ಯರಿದ್ದು, ಗ್ರಾಮಗಳ ಅಭಿವೃದ್ದಿಗಾಗಿ 5 ಕೆರೆಗಳ ರಚನೆ, ಸರ್ಕಾರಿ ಶಾಲೆಗಳಿಗೆ ಡೆಸ್ಕ್, ಬೆಂಜ್ ವಿತರಣೆ, ಜ್ಞಾನದೀಪದಡಿ ಅತಿಥಿ ಶಿಕ್ಷಕರಿಂದ ಮಕ್ಕಳಿಗೆ ತರಬೇತಿ, ವೃದ್ದರಿಗೆ ಕಿಟ್ ವಿತರಣೆ, ವಿಕಲಚೇತನರಿಗೆ ಮಾಸಾಶನ ಸೇರಿದಂತೆ ಹಲವು ಕೊಡುಗೆಗಳನ್ನು ನೀಡುತ್ತಿದೆ ಎಂದರು.

ಮಹಿಳೆಯರು ಒತ್ತಡದಿಂದ ಹೊರ ಬಂದು ಆರೋಗ್ಯದ ಕಡೆಗೆ ಗಮನಹರಿಸಬೇಕು. ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು. ಇದಕ್ಕೆ ಸಂಸ್ಥೆ ಸಹಕಾರ ನೀಡುತ್ತದೆ ಎಂದರು.

ಬಂಡೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಮುಖ್ಯ ವೈದ್ಯಾಧಿಕಾರಿ ಡಾ. ಆರ್.ಜೆ.ಶೋಭಾ ದೈನಂದಿನ ದಿನಗಳಲ್ಲಿ ಮಹಿಳೆಯರ ಆರೋಗ್ಯ ಅರಿವು ಕುರಿತು ಮಾತನಾಡಿ, ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ. ರೋಗ ಬರುವುದಕ್ಕಿಂತ ಮುಂಚಿತವಾಗಿ ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪ್ರತಿದಿನ ಯೋಗವನ್ನು ಅಳವಡಿಸಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಆಯುರ್ವೇದದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸ್ಪಂದನ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಆದಿತ್ಯಗೌಡ, ತಾಲೂಕು ಯೋಜನಾಧಿಕಾರಿ ಎನ್.ಲೊಕೇಶ್ ಸೇರಿದಂತೆ ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ಮೇಲ್ವಿಚಾರಕು ಇದ್ದರು.