ಗ್ರಾಮ ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಿ: ದೀಪಾ

| Published : Feb 07 2024, 01:48 AM IST

ಸಾರಾಂಶ

ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರು ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಹುಣಸಗಿ

ಗ್ರಾಮದ ಜನರು ಆರೋಗ್ಯವಾಗಿರಬೇಕಾದರೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಡಾ. ದೀಪಾ ವಾಲಿ ಹೇಳಿದರು.

ತಾಲೂಕಿನ ದೇವಾಪೂರ (ಜೆ) ಗ್ರಾಮದಲ್ಲಿ ನಡೆದ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತ, ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಒಂದು ವೇಳೆ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಹಲವಾರು ಕಾಯಿಲೆಗಳು ಹರಡುತ್ತವೆ. ಇದಕ್ಕೆ ನಾವುಗಳು ಬಲಿಯಾಗದೆ ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡಬೇಕು ಎಂದರು.

ಗ್ರಾಮದಲ್ಲಿರುವ ಗರ್ಭಿಣಿಯರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕಾದರೆ, ಉತ್ತಮ ಗುಣಮಟ್ಟದ, ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡಬೇಕು. ಪೌಷ್ಟಿಕಾಂಶದ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ಗರ್ಭಿಣಿಯರು ಅರಿತುಕೊಳ್ಳಬೇಕು. ಅಪೌಷ್ಟಿಕ ಗರ್ಭಿಣಿಯರಿಗೆ ಕಡಿಮೆ ತೂಕದ ಮತ್ತು ಅನಾರೋಗ್ಯ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಗರ್ಭಿಣಿಯರು ಕಾಳಜಿ ವಹಿಸಿ, ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ಸೇವಿಸಲು ತಿಳಿಸಿದರು.

ಪರಿಶಿಷ್ಟ ಪಂಗಡ ಸದಸ್ಯ ಮಲ್ಲಪ್ಪ ಬಾಕಲಿ, ಆರೋಗ್ಯ ಕ್ಷೀರಕ್ಷಣ ಅಧಿಕಾರಿ. ಶಾಂತಪ್ಪ ಹೂಗಾರ, ಸಂಗಣ್ಣ ಬಾಕಲಿ, ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ ಚಿನವಾಲ, ಆಶಾ ಕಾರ್ಯಕರ್ತೆಯರಾದ ಸುಗಮಕಾರ ಶಾಂತಮ್ಮ ಕಟ್ಟಿಮನಿ, ಸುಮಂಗಲಾ ಕಟ್ಟಿಮನಿ, ಯಂಕಮ್ಮ ಸೇರಿದಂತೆ ಇತರರಿದ್ದರು.