ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಸತ್ಸಂಗಗಳಲ್ಲಿ ಪಾಲ್ಗೊಳ್ಳಿ-ಸ್ವಾಮೀಜಿ

| Published : Jul 26 2025, 01:30 AM IST

ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಸತ್ಸಂಗಗಳಲ್ಲಿ ಪಾಲ್ಗೊಳ್ಳಿ-ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಪ್ರತಿಯೊಬ್ಬರೂ ಪುರಾಣ, ಪುಣ್ಯಕಥೆ ಆಲಿಸುವ ಮೂಲಕ ಸನ್ಮಾರ್ಗ, ಧರ್ಮಾಚರಣೆ, ಸತ್ಸಂಗಗಳಲ್ಲಿ ಪಾಲ್ಗೊಳ್ಳುವ ಮೂಲಕ ಬದುಕಿನ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಲಕ್ಷ್ಮೇಶ್ವರ: ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಪ್ರತಿಯೊಬ್ಬರೂ ಪುರಾಣ, ಪುಣ್ಯಕಥೆ ಆಲಿಸುವ ಮೂಲಕ ಸನ್ಮಾರ್ಗ, ಧರ್ಮಾಚರಣೆ, ಸತ್ಸಂಗಗಳಲ್ಲಿ ಪಾಲ್ಗೊಳ್ಳುವ ಮೂಲಕ ಬದುಕಿನ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ಹೇಳಿದರು. ಅವರು ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶಿದ್ದೇಶ್ವರ ಸತ್ಸಂಗ ಬಳಗ, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ, ಲಕ್ಷ್ಮೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್, ಲಕ್ಷ್ಮೇಶ್ವರ ತಾಲೂಕು ಕದಳಿ ಮಹಿಳಾ ವೇದಿಕೆ, ರಾಜ ರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಹಾಗೂ ಅಕ್ಕಮಹಾದೇವಿ ಬಳಗ, ಪ್ರೇಮಕ್ಕ ಬಿಂಕದಕಟ್ಟಿ ಅಭಿಮಾನಿ ಬಳಗ ಸಂಯುಕ್ತಾಶ್ರಯದಲ್ಲಿ ತಿಂಗಳ ಪರ್ಯಂತ ನಡೆಯುವ ೨೦ನೇ ವರ್ಷದ ಶ್ರಾವಣ ಸಂಜೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಪ್ರಸ್ತುತ ದಿನಮಾನಗಳಲ್ಲಿ ದೂರದರ್ಶನ, ಮೊಬೈಲ್, ಕಂಪ್ಯೂಟರ್ ಪ್ರಭಾವದಿಂದ ಪುರಾಣ ಪ್ರವಚನಗಳಿಂದ ದೂರ ಸರಿಯುತ್ತಿರುವುದರಿಂದ ಧಾರ್ಮಿಕ ಮನೋಭಾವ ಕಡಿಮೆಯಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ನಿಟ್ಟಿನಲ್ಲಿ ಮಹಿಳಾ ಬಳಗದವರು ಕೈಗೊಳ್ಳುವ ಸತ್ಸಂಗ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ವೇದಿಕೆಗಳಾಗಿದ್ದು ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನ ಜಂಜಾಟದ ನಡುವೆ ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಭಾರತ ಶ್ರೇಷ್ಠವಾದ ಸಂಸ್ಕೃತಿ, ಸಂಪ್ರದಾಯಗಳ ತವರಾಗಿದ್ದು ಈ ಪುಣ್ಯ ನೆಲದಲ್ಲಿ ಅವತರಿಸಿದ ಅನೇಕ ಮಹಾತ್ಮರು, ಪುಣ್ಯಪುರುಷರು, ಶರಣರು, ಸಂತರು, ಕಾಯಕ ಯೋಗಿಗಳು ಸಮಾಜದ ಬೆಳಕಾಗಿದ್ದಾರೆ. ಅವರ ಚಿಂತನೆ, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಅಗಡಿ ಕಾಲೇಜಿನ ಉಪನ್ಯಾಸಕ ಸಿ.ಎಸ್. ಹಿರೇಮಠ ಮಾತೆಂಬುದು ಜ್ಯೋತಿರ್ಲಿಂಗ ವಿಯ ಕುರಿತು ಉಪನ್ಯಾಸ ನೀಡಿ, ಮಾತುಗಳು ಮನುಷ್ಯನ ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದು ಎಲ್ಲರನ್ನೂ ಗೆಲ್ಲುವ ಮಾತಿನ ಅಂತಶಕ್ತಿ ಅರಿತು ನಡೆದರೆ ಬದುಕು ಹಸನಾಗಿರುತ್ತದೆ ಎಂದರು. ಅಧ್ಯಕ್ಷತೆವಹಿಸಿದ್ದ ಹಿರಿಯ ನ್ಯಾಯವಾದಿ ವಿ.ಎಲ್ ಪೂಜಾರ ಮಾತನಾಡಿ, ಕೃಷಿ ಪ್ರಧಾನ ನಾಡಿನಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಹಬ್ಬ, ಆಚರಣೆ, ಸಂಪ್ರದಾಯ, ಧರ್ಮಕಾರ್ಯ, ಪುರಾಣ-ಪ್ರವಚನ ಕೇಳುವ ಮೂಲಕ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಕೊಡಬೇಕು ಎಂದರು. ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಪ್ರಾಸ್ತಾವಿಕ ಮಾತನಾಡಿ, ಕಳೆದ ೨೦ ವರ್ಷಗಳಿಂದ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ದಿ. ಪ್ರೇಮಕ್ಕ ಬಿಂಕದಕಟ್ಟಿ ಅವರ ನೇತೃತ್ವದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮ ಮಾಡುತ್ತಾ ಬರಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಧರ್ಮದ ವಿಚಾರ, ಚಿಂತನ- ಮಂಥನ, ಶರಣರ ಕುರಿತು ಉಪನ್ಯಾಸಗಳು, ಸಾಹಿತ್ಯ, ವಚನಗಳ ಮಹತ್ವ, ಸ್ವಾತಂತ್ರ ಹೋರಾಟಗಾರರ ಬಗ್ಗೆ ಕುರಿತು ವಿವಿಧ ಉಪನ್ಯಾಸರಿಂದ ಕಾರ್ಯಕ್ರಮ ನಡೆಸುತ್ತಿದೆ.ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಲಲಿತಾ ಕೆರಿಮನಿ, ಸುಭಾಸ ಓದುನವರ, ಎಸ್.ಬಿ ಕೊಣ್ಣೂರ, ಪಿ.ಬಿ. ಖರಾಟೆ. ಎಂ.ಎನ್. ಗೊರವರ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್. ಎಸ್. ಅರಳಹಳ್ಳಿ, ನಂದಿನಿ ಮಾಳವಾಡ ಸೇರಿ ಹಲವರಿದ್ದರು. ಕೆಯುಡಬ್ಲೂಜೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಿಗಂಬರ ಪೂಜಾರ, ತನುಶ್ರೀ ಬದಿ, ಕೃಷ್ಣಪ್ರಿಯಾ ಬದಿ ಅವರನ್ನು ಸನ್ಮಾನಿಸಲಾಯಿತು. ರತ್ನಾ ಕರ್ಕಿ ನಿರೂಪಿಸಿದರು.