ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೨೫ ವರ್ಷಗಳ ಸಾರ್ವಜನಿಕ ಸೇವೆಯ ಮೈಲಿಗಲ್ಲು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಕನೂರು ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ರಕ್ತದಾನ ಶಿಬಿರ ನಡೆಯಿತು.

ಕುಕನೂರು: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಹೇಳಿದರು.

ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಬಿಜೆಪಿ ಜಿಲ್ಲಾ ಘಟಕದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೨೫ ವರ್ಷಗಳ ಸಾರ್ವಜನಿಕ ಸೇವೆಯ ಮೈಲಿಗಲ್ಲು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ರಕ್ತದಾನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಜನರ ಆರೋಗ್ಯ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡುವ ಸೇವೆಯೇ ಸಂಕಲ್ಪವಾಗಿದೆ. ಜನಸೇವೆಯೇ ನಮ್ಮ ಧ್ಯೇಯ ಎಂಬ ಆಶಯದೊಂದಿಗೆ ಆಯೋಜಿಸಲಾದ ಈ ಶಿಬಿರವು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಅಗತ್ಯ ತಪಾಸಣೆ ಹಾಗೂ ಸಲಹೆಗಳನ್ನು ಒದಗಿಸಲಾಗುತ್ತಿದೆ ಎಂದರು.

ಜಿಪಂ ಮಾಜಿ ಸದಸ್ಯ ಅರವಿಂದಗೌಡ ಶಿವಶರಣಪ್ಪಗೌಡ ಪಾಟೀಲ್ ಮಾತನಾಡಿ, ದೇಶದ ಭದ್ರತೆಗಾಗಿ ಮೋದಿ ಅವರು ಸೇವೆ ಮಾಡುತ್ತಿದ್ದಾರೆ. ಭಾರತವನ್ನು ಉಜ್ವಲಗೊಳಿಸುತ್ತಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಭದ್ರತೆ ಒದಗಿಸುವ ಮೂಲಕ ಬಡವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು.

ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪುರಮಠ ಮಾತನಾಡಿದರು. ಉದ್ಯಮಿ ಅನಿಲ ಆಚಾರ, ರೆಡ್ ಕ್ರಾಸ್ ಸಂಸ್ಥೆಯ ದೇವೇಂದ್ರಪ್ಪ, ಪ್ರಮುಖರಾದ ಶಿವಪ್ಪ ವಾದಿ, ಪ್ರಕಾಶ ಬೋರಣ್ಣವರ, ಮಹಾಂತೇಶ್ ಹೂಗಾರ, ಕನಕಪ್ಪ ಬ್ಯಾಡರ, ಜಗದೀಶ ಸೂಡಿ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಲಕ್ಷ್ಮಣ ಕಾಳಿ, ಮಧುಸೂದನ್ ಬಾರಿಗಿಡದ, ವಿರೂಪಾಕ್ಷಪ್ಪ ಹುಳ್ಳಿ, ರಮೇಶ, ಪ್ರಕಾಶ ಬೋರಣ್ಣನವರ, ರಾಮಣ್ಣ ಮುಂದಲಮನಿ, ಫಕ್ಕೆಪ್ಪ ಸಾಲಮ್ನಿ ಇತರರು ಈ ಸಂದರ್ಭದಲ್ಲಿ ಇದ್ದರು.