ಶಿರಸಿ ನಗರದ ಯೋಗ ಮಂದಿರದಲ್ಲಿ ಶನಿವಾರ ಜರುಗಿದ ಯೋಗಮಂದಿರದ 29ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸೋಂದಾ ಸ್ವರ್ಣವಲ್ಲೀ‌ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಭಾಗವಹಿಸಿದ್ದರು.

ಶಿರಸಿ: ಪ್ರತಿಯೊಬ್ಬರೂ ಧರ್ಮಾಚರಣೆ‌ ಸಹಿತ ಕರ್ಮ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು‌.

ಅವರು ಶನಿವಾರ ನಗರದ ಯೋಗ ಮಂದಿರದಲ್ಲಿ ಜರುಗಿದ ಯೋಗಮಂದಿರದ 29ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಂಕರಾಚಾರ್ಯರಿಗೆ ಇಡೀ ವಿಶ್ವದಲ್ಲಿ ಉತ್ತಮ ಸ್ಥಾನವಿದೆ. ‌ಅವರ ಸಮನ್ವಯ ಸಿದ್ಧಾಂತ ಅಷ್ಟು ಮಹತ್ವದ್ದಾಗಿದ್ದು, ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಶಿರಸಿಯಲ್ಲಿ ಯೋಗ ಮಂದಿರ ನಿರ್ಮಾಣ ಮಾಡಲಾಗಿದೆ. ಯೋಗಮಂದಿರದಲ್ಲಿ ಶಂಕರಾಚಾರ್ಯರರ ಮೂರ್ತಿ ಪ್ರತಿಷ್ಠಾಪಿಸಿದ ಆನಂತರ ಇಲ್ಲಿನ ಕಾರ್ಯಚಟುವಟಿಕೆ ಚುರುಕುಗೊಂಡಿದೆ ಎಂದು ಹೇಳಿದರು. ನಮ್ಮ ಕುಲದೇವತೆಯನ್ನು ಉಪಾಸನೆ ಮಾಡುತ್ತ ಮುಂದುವರಿಯಬೇಕು. ಆಗ ಆನಂದ ಸ್ವರೂಪದ ಅನುಭವವಾಗುತ್ತದೆ. ಯೋಗವನ್ನು ಪ್ರಚಾರ ಪಡಿಸುವುದೇ ಯೋಗ ಮಂದಿರದ ಮುಖ್ಯ ಉದ್ದೇಶ. ಇಂತಿಂಥವರು ಇಂತಿಂಥ ಕರ್ಮ ಮಾಡಬೇಕು ಎಂದು ಶಾಸ್ತ್ರ ತಿಳಿಸಿದೆ‌. ಅದರಂತೆ ಮುನ್ನಡೆಯಬೇಕು. ಧರ್ಮಾಚರಣೆ ಬಹಳ ಮುಖ್ಯವಾಗಿರುತ್ತದೆ. ತನಗಿರುವ ಶಕ್ತಿ ಸಾಮರ್ಥ್ಯದಿಂದ ಎಲ್ಲರ ಹಿತ ಬಯಸಬೇಕು. ಕರ್ಮವನ್ನು ನಾನು ಮಾಡಿದೆ ಎಂದು ಅಂದುಕೊಳ್ಳಬಾರದು. ಹಲವರ ಸಹಕಾರವಿರುತ್ತದೆ. ನಾನು ಮಾಡಿದ್ದೇನೆ ಎಂಬ ಅಹಂ ಇರಬಾರದು ಎಂದರು‌.

ಫಲ ಬಂದಾಗ ಹಿಗ್ಗದೆ, ಬಾರದೇ ಇದ್ದಾಗ ಕುಗ್ಗದೇ ಜೀವನ ಮಾಡಬೇಕು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಇಂತಹ ಸಮತೆ ಬರುವುದು ಸುಲಭವಲ್ಲ. ದೇವರ ಧ್ಯಾನ, ಭಕ್ತಿಗಳಿಂದ ಮಾತ್ರ ಸಾಧ್ಯವಿದೆ. ದೇವರ ಪೂಜೆ, ಯೋಗ-ಪ್ರಾಣಾಯಾಮ ಹಾಗೂ ಸ್ತೋತ್ರ ಪಠಣವನ್ನು ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದರು.

ಸಮಾಜದಲ್ಲಿ ವಿವಾಹದ ಸಮಸ್ಯೆ ವಿಪರೀತವಾಗಿದ್ದು, ಸಮಾಜ ಮುಂದೆ ಅಲ್ಲೊಲ ಕಲ್ಲೋಲ ಆಗಬಹುದು. ಮಕ್ಕಳಿಗೆ ಮಾರ್ಗದರ್ಶನ ಮಾಡದಿರುವುದೇ ಇದಕ್ಕೆ ಕಾರಣ ಎನ್ನಿಸುತ್ತದೆ. ಸೂಕ್ತ ವಯಸ್ಸಿಗೆ ವಿವಾಹವಾದರೆ ಆ ಕುಟುಂಬ ಉಳಿಯುತ್ತದೆ ಎಂದರು.

ಈ ಸಂದರ್ಭದಲ್ಲಿ ಹರಿದಾಸರತ್ನ ನಾರಾಯಣದಾಸ ಹಾಗೂ ನೇತ್ರ ತಜ್ಞ ಡಾ. ಶಿವರಾಮ ಕೆ.ವಿ. ದಂಪತಿಯನ್ನು ಮತ್ತು ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಸ್ಥ ಮಾಡಿದ ಸ್ನೇಹ ಶರ್ಮಾ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಹರಿದಾಸ ರತ್ನ ನಾರಾಯಣ ದಾಸ, ನೇತ್ರತಜ್ಞ ಡಾ. ಶಿವರಾಮ ಕೆ.ವಿ. ಮಾತನಾಡಿದರು.

ಯೋಗ ಮಂದಿರದ ಅಧ್ಯಕ್ಷ ಎಸ್.ಎನ್. ಉಪಾಧ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಕೇಂದ್ರ ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ, ತೃಯಂಬಕ ಹೆಗಡೆ, ದಾಮೋದರ ಭಟ್ಟ, ಸುನಂದಾ ಭಟ್ಟ, ಮಾಧುರಿ ಶಿವರಾಮ, ಭಾರತಿ ನಾರಾಯಣದಾಸ ಇತರರು ಇದ್ದರು. ರಾಜರಾಜೇಶ್ವರಿ ವಿದ್ಯಾಲಯದ ವಿದ್ಯಾರ್ಥಿಗಳು ವೇದಘೋಷ ಹಾಡಿದರು. ಹೇಮಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಶಾಂತಾರಾಮ ಭಂಡಿಮನೆ, ದಾಮೋದರ ಭಟ್ಟ, ಕೆ.ವಿ. ಭಟ್ಟ ದಂಪತಿ ಫಲ ಸಮರ್ಪಿಸಿದರು. ಕಾರ್ಯದರ್ಶಿ ಸಿ.ಎಸ್. ಹೆಗಡೆ ವರದಿ ವಾಚಿಸಿದರು. ಶಂಕರ ಭಟ್ಟ ಉಂಚಳ್ಳಿ, ಶ್ರೀಕಾಂತ ಹೆಗಡೆ ಸನ್ಮಾನಪತ್ರ ವಾಚಿಸಿದರು. ಅನಿತಾ ಶ್ರೀಕಾಂತ ಹೆಗಡೆ ನಿರ್ವಹಿಸಿದರು. ಸ್ನೇಹಾ ಶರ್ಮಾ ಅವರನ್ನು ಗೌರವಿಸಲಾಯಿತು. ಯೋಗ ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಮುಂಜಾನೆಯಿಂದ ರುದ್ರ ಹವನ, ಶತರುದ್ರ, ಸಾಮೂಹಿಕ ಗಣಹವನ, ಶ್ರೀಗಳ ಪಾದಪೂಜೆ, ಭಿಕ್ಷ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.