ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಯಿಯ ಹೆಸರಿನಲ್ಲಿ ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಲಭಿಸುತ್ತದೆ. ತಾಯಿ ವರ್ಣಿಸಲು ಅಸಾಧ್ಯವಾದ ಸಂಬಂಧ ಹಾಗೂ ಪೂಜ್ಯ ಭಾವನೆ ಇರುವ ಕಾರಣದಿಂದ "ತಾಯಿಯ ಹೆಸರಿನಲ್ಲಿ ಒಂದು ಮರ " ಎಂಬ ವಿಶೇಷ ಯೋಜನೆಯಡಿ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಣೆಯ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡುವ ವಿನೂತನ ಕಾರ್ಯಕ್ರಮದಲ್ಲಿ ನಾವುಗಳು ಕೈ ಜೋಡಿಸಿ, ಗಿಡಗಳನ್ನು ನೆಟ್ಟು ಪೋಷಿಸೋಣವೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್ ಸಲಹೆ ನೀಡಿದರು.
ತಾಲೂಕಿನ ತಟ್ಟೆಕೆರೆ ಬಾರೆಯಲ್ಲಿರುವ ಆದರ್ಶ ವಿದ್ಯಾಲಯ ಆವರಣದಲ್ಲಿ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಇಲಾಖೆ ಸಹಯೋಗದಲ್ಲಿ "ಏಕ್ ಪೇಡ್ ಮಾ ಕೆ ನಾಮ್ " ಎಂಬ ಘೋಷವಾಕ್ಯದ ಸಂಕಲ್ಪದೊಂದಿಗೆ ೧೪೦ ಕೋಟಿ ಸಸಿಗಳನ್ನು ನೆಡುವ ಯೋಜನೆಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ನಿರ್ದೇಶನದನ್ವಯ ವಕೀಲರ ಸಂಘ ಹಾಗೂ ತಾಲೂಕು ವ್ಯಾಪ್ತಿಯಲ್ಲಿನ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಉತ್ತಮ ಹಾಗೂ ಅಗತ್ಯವಾದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ನಗರಾಭಿವೃದ್ಧಿ, ಲೇಔಟ್ ಹಾಗೂ ಕಾರ್ಖಾನೆಗಳ ಸ್ಥಾಪನೆಗಾಗಿ ಅರಣ್ಯಗಳ ನಾಶ ಮಾಡಿದರಿಂದ ಪರಿಸರ ಹದಗೆಟ್ಟಿದೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ರೀತಿಯ ಪರಿಸರ ಉಳಿಸುವ ಸಲುವಾಗಿ ತಾಯಿ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಸರ್ಕಾರ ನಿಮಗೆ ನೀಡಿದೆ. ಎಲ್ಲರೂ ಕೈ ಜೋಡಿಸಿ, ಗಿಡಗಳನ್ನು ನೆಟ್ಟು ಪೋಷಿಸೋಣವೆಂದು ಕರೆಕೊಟ್ಟರು.ಬಿಇಒ ಸೋಮಲಿಂಗೇಗೌಡ ಮಾತನಾಡಿ, ೩೦ ವರ್ಷಗಳ ಹಿಂದೆ ನಾ ಕಂಡ ಅರಣ್ಯ ಪ್ರದೇಶ ಇಂದು ನಾವು ಕಾಣುತ್ತಿರುವ ಅರಣ್ಯ ಪ್ರದೇಶವನ್ನು ಗಮನಿಸಿದಾಗ ಹೆದರಿಕೆಯಾಗುತ್ತದೆ. ಅಂದು ಕಾಲಕಾಲಕ್ಕೆ ಮಳೆಯಾಗುತ್ತಿತ್ತು, ಇಂದು ಏರುಪೇರಾಗಿದೆ. ಕಾರಣ ಹುಡುಕಿದಾಗ ಅರಣ್ಯನಾಶದಿಂದಾಗಿ ಎಂದು ತಿಳಿಯಬಹುದು. ಶುದ್ಧವಾದ ಗಾಳಿ ಮತ್ತು ಉತ್ತಮ ಪರಿಸರಕ್ಕಾಗಿ ಅರಣ್ಯಗಳ ಪುನರ್ನಿರ್ಮಿಸುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ತಾಯಿ ಹೆಸರಿನಲ್ಲಿ ಒಂದು ಮರ ಎಂಬ ಯೋಜನೆಯೂ ಅತ್ಯಂತ ಮಹತ್ವದ್ದಾಗಿದ್ದು, ಯಶಸ್ವಿಗೊಳಿಸಬೇಕಾದ್ದು ನಮ್ಮಗಳ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ತಿಳಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಮಾತನಾಡಿದರು. ಶಿಕ್ಷಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಮೋಹನ್ ಕುಮಾರ್, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಶೃತಿ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಉಲಿವಾಲ ಸತೀಶ್, ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕುಮಾರ್, ಗಸ್ತು ಅರಣ್ಯ ಪಾಲಕ ವಿನಯ್, ಸಿಬ್ಬಂದಿಯಾದ ಮಂಜೇಗೌಡ, ಹೇಮಂತ್ ಇತರರು ಇದ್ದರು.