ಭೂ ಸಂರಕ್ಷಣೆಗೆ ಪ್ರತಿಯೊಬ್ಬರು ಸಸಿಗಳ ನೆಟ್ಟು ಪೋಷಿಸಿ

| Published : Apr 25 2025, 11:52 PM IST

ಸಾರಾಂಶ

ಸರ್ಕಾರದ ನಿರಾಸಕ್ತಿಯಿಂದ ಪರಿಸರ ಬೆಳವಣಿಗೆ ಕುಂಠಿತವಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪರಿಸರ ನಾಶದಿಂದ ಹವಾಮಾನದಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ ನೀರು ಸಂಬಂಧಿತ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಭೂಮಿಯನ್ನು ಸಂರಕ್ಷಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ್ ಅಭಿಪ್ರಾಯಪಟ್ಟರು.

ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕೃಷಿಕ ಸಮಾಜ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ ವಿಶ್ವ ಭೂ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಹೆಸರಿನಲ್ಲಿ ಅತಿಯಾಗಿ ಮರಗಳನ್ನು ನಾಶಪಡಿಸಲಾಗುತ್ತಿದೆ. ಸರ್ಕಾರದ ನಿರಾಸಕ್ತಿಯಿಂದ ಪರಿಸರ ಬೆಳವಣಿಗೆ ಕುಂಠಿತವಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಇದು ನೀರಿನ ಕೊರತೆ ಮತ್ತು ನೀರು ಸಂಬಂಧಿತ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ಮಂಜುಳಾ ನಾಯಕ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಾವಯವ ಕೃಷಿಗೆ ಒತ್ತು ನೀಡಿ ಮಣ್ಣು ಸಂರಕ್ಷಣೆ ಮಾಡಬೇಕು. ಇದರೊಂದಿಗೆ ಭೂ ಸಂರಕ್ಷಣೆ ಕ್ರಮ ವಹಿಸಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಗುರುಪ್ರಸಾದ ಸಿ, ಪಿಎಸ್‌ಐ ನಿಖಿಲ್ ಕಾಂಬಳೆ, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರುಬೇಟ, ನ್ಯಾಯವಾದಿಗಳಾದ ಅನಿಲ ಕರೋಶಿ, ಬಿ.ಎಂ.ಜಿನರಾಳಿ, ಅನಿತಾ ಕುಲಕರ್ಣಿ, ಎಸ್.ಜಿ.ನದಾಫ್, ಕೃಷಿ ಇಲಾಖೆಯ ಪುರುಷೋತ್ತಮ ಫೀರಾಜೆ, ಶಿವಾನಂದ ಕಾಮತ, ಸಮೀರ ಲೋಕಾಪುರ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಕಾದಂಬರಿ ಪಾಟೀಲ್ ನಿರೂಪಿಸಿ ವಂದಿಸಿದರು.