ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಬರಪೀಡಿತ ಜಿಲ್ಲೆ ಕೋಲಾರದಲ್ಲಿ ನೀರಿಗಾಗಿ ಜನತೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಪರಿಸರ ಮಿತ್ರ ಬಳಗದಿಂದ ಸಾರ್ವಜನಿಕರಿಗೆ ವಿತರಣೆ ಮಾಡುವ ಸಸಿಗಳನ್ನು ಪ್ರತಿಯೊಬ್ಬರು ನೆಡುವ ಮೂಲಕ ಪರಿಸರ ಉಳಿಸಿ ಬೆಳೆಸಲು ಒತ್ತು ನೀಡಬೇಕು ಎಂದು ಎಸ್ಪಿ ಡಾ.ಬಿ.ನಿಖಿಲ್ ಹೇಳಿದರು.ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಪರಿಸರ ಪ್ರೇಮಿಗಳ ಬಳಗ, ಸೂರ್ಯ ಪ್ರಿಯ ಕನ್ಟ್ರಕ್ಷನ್ ಪ್ರೈ ಲಿಮಿಟೆಡ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಲಯನ್ ಕ್ಲಬ್ ಕೋಲಾರ ಹಾಗೂ ಕೋಲಾರ ರೋಟರಿ ನಂದಿನಿ ಸಹಯೋಗದಲ್ಲಿ ನಡೆದ ದೀಪಾವಳಿ ಹಬ್ಬದ ಪ್ರಯುಕ್ತ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಸಸಿಯನ್ನು ವಿತರಿಸಿ ಮಾತನಾಡಿದರು.ಶುದ್ಧ ಗಾಳಿಗಾಗಿ ಗಿಡ ನೆಡಿ
ಮುಂಬರುವ ಯುವ ಪೀಳಿಗೆ ಹಿತ ದೃಷ್ಟಿಯಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ ತಡೆ ಹಿಡಿಯಲು ಸಾಧ್ಯ ವಾದಷ್ಟು ಗಿಡಗಳನ್ನು ಬೆಳೆಸುವ ಪ್ರವೃತ್ತಿ ಹೊಂದಬೇಕು ಎಂದರಲ್ಲದೆ, ನೆಡುವ ಒಂದು ಗಿಡ ಮುಂದೆ ಸಾವಿರ ಮಂದಿಗೆ ಉತ್ತಮ ಗಾಳಿಯನ್ನು ನೀಡುತ್ತದೆ, ಜತೆಯಲ್ಲೇ ಪರಿಸರ ಭೂಮಿಯನ್ನು ಭದ್ರಗೊಳಿಸುತ್ತದೆ ಎಂದು ತಿಳಿಸಿದರು.ಈ ಕಾರ್ಯಕ್ರಮ ಜಿಲ್ಲೆಯ ಪ್ರತಿಯೊಬ್ಬರಿಗೂ ಪ್ರಸುತ್ತವಾದ ಕಾರ್ಯವಾಗಿದ್ದು, ಪಟಾಕಿಯನ್ನು ಹಿಡಿದು ಬರುವ ಜನತೆಗೆ ಸಸಿಗಳ ವಿತರಣೆ ಸತತ ೬ನೇ ವರ್ಷ ದ ಕಾರ್ಯಕ್ರಮ ಉತ್ತಮ ಕಾರ್ಯವಾಗಿದ್ದು, ಪಟಾಕಿ ಹೊಡೆಯುವ ಜೊತೆಗೆ ಒಂದು ಗಿಡವನ್ನು ದೀಪಾವಳಿ ಪ್ರಯುಕ್ತ ನೆಡುವ ಕೆಲಸವಾಗಬೇಕು ಎಂದು ನುಡಿದರು.ಪರಿಸದ ಮೇಲೆ ದಾಳಿ ನಿಲ್ಲಲಿಅಪರ ಜಿಲ್ಲಾಧಿಕಾರಿ ಮಂಗಳಾ ಮಾತನಾಡಿ, ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ. ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು. ಬೃಹತ್ ಮರಗಳ ನಾಶ
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ವಕೀಲ ಕೆ.ವಿ.ಶಂಕರಪ್ಪ ಮಾತನಾಡಿ, ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದಲು ಪರಿಸರ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ. ನಗರದಲ್ಲಿ ಪ್ರಮುಖ ವೃತ್ತದ ರಸ್ತೆ ಬದಿಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇತರ ಸಹಯೋಗದಲ್ಲಿ ಸಸಿ ಗಳನ್ನು ನೆಡುವ ಆಂದೋಲನವನ್ನು ಮಾಡುತ್ತಿದೆ. ದುರದೃಷ್ಟವೆಂದರೆ ನಗರದ ಕೆಲ ಭಾಗದಲ್ಲಿ ಬೃಹತ್ ಮರಗಳನ್ನು ನಾಶ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಶಾಶ್ವತ ನೀರಾವರಿ ಹೋರಾಟದ ಜಿಲ್ಲಾ ಸಂಚಾಲಕ ವಿ. ಕೆ. ರಾಜೇಶ್ ಮಾತನಾಡಿದರು. ಕೆ.ಎಸ್.ಗಣೇಶ್, ಸ್ಕೌಟ್ ಬಾಬು, ಸುರೇಶ್, ಸಂತೋಷ್, ವೆಂಕಟೇಶ್, ಮಹೇಶ್ ಕದಂರಾವ್ ಮಂಜುಳ, ವೆಂಕಟಪ್ಪ, ಪ್ರಭಾ, ಲಕ್ಷ್ಮೀ ನಾರಾಯಣ, ಉಮಾದೇವಿ ಇದ್ದರು.