ಸಾರಾಂಶ
ಗಣರಾಜ್ಯ ಹಬ್ಬದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಈ ದೇಶಕ್ಕೆ ಹೊರಗಿನ ಶತ್ರುಗಳಿಗಿಂತ ದೇಶದ ಒಳಗಿರುವ ರಾಷ್ಟ್ರ ವಿರೋಧಿ ಶಕ್ತಿಗಳ ಬಗ್ಗೆ ಆತಂಕವಿದ್ದು ಗಣರಾಜ್ಯೋತ್ಸವದ ಈ ದಿನದಂದು ಪ್ರತಿಯೊಬ್ಬ ಪ್ರಜೆಯೂ ದೇಶಕ್ಕಾಗಿ ಸಮರ್ಪಿತ ಬದುಕನ್ನು ಬದುಕುವ ಪ್ರತಿಜ್ಞೆಯನ್ನು ತೊಡಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಡಶಾಲಾ ಕ್ರೀಡಾಂಗಣದಲ್ಲಿ ನಡೆದ 76ನೇ ಗನರಾಜ್ಯೋತ್ಸವದಲ್ಲಿ ಕೃಷಿ, ಕ್ರೀಡೆ, ಕಲೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿ, ನಮ್ಮ ಸಂವಿಧಾನವನ್ನು ಒಟ್ಟು 106 ಬಾರಿ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.ನಮ್ಮನ್ನು ನಾವೇ ಆಳಿಕೊಳ್ಳಲು ಕಾರಣರಾದ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಋಣವನ್ನು ತೀರಿಸಲು ದೇಶಕ್ಕಾಗಿ ಸಮರ್ಪಿತ ಬದುಕನ್ನು ಬದುಕುವ ಪ್ರತಿಜ್ಞೆಯನ್ನು ತೊಡಬೇಕಿದೆ. ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಈ ದೇಶದ ಸಂವಿಧಾನ ಅತ್ಯಂತ ಮಹತ್ವವನ್ನು ಹೊಂದಿದ್ದು ಎಲ್ಲರಿಗೂ ಸಮಾನ ಬದುಕನ್ನು ನೀಡಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಸವಲತ್ತನ್ನು ನೀಡಿದೆ. ಆದರೆ ಪ್ರಜೆಯಾದವನು ದೇಶಕ್ಕಾಗಿ ಏನು ಮಾಡಬೇಕೆಂದು ಬರೆದಿಲ್ಲ ಎಂದು ಹೇಳಿದರು.
ತಹಸಿಲ್ದಾರ್ ಎಸ್.ರಂಜಿತ್, ದೇಶ ಕಟ್ಟುವ ಪ್ರಕ್ರಿಯೆ ನಿರಂತರವಾಗಿದ್ದು ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಯೊಂದಿಗೆ ಗ್ರಾಮೀಣ ಭಾಗದ ಹಳ್ಳಿಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಧೃಡಪಡಿಸುವ ಅನಿವಾರ್ಯತೆ ಇದೆ. 60 ದಶಕದಲ್ಲಿ ಯುದ್ದದಲ್ಲಿ ಹಿನ್ನಡೆ ಪಡೆದಿದ್ದ ಭಾರತ ಇಂದು ಯುದ್ದ ವಿಮಾನ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಹಂತಕ್ಕೆ ಅಭಿವೃದ್ದಿ ಹೊಂದಿದ್ದು ವಿಶ್ವದ ನಾಲ್ಕನೇ ಪ್ರಬಲ ರಾಷ್ಟ್ರವಾಗಿದೆ ಎಂದರು.ರಾಜಕೀಯ ಸಾಹಿತ್ಯ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿಯೂ ಮುಂಚೂಣಿಯಲ್ಲಿರುವ ಈ ತಾಲೂಕಿನಲ್ಲಿ ಉದ್ಯೋಗದ ಕೊರತೆಯಿಂದಾಗಿ ಯುವಕರು ಉದ್ಯೋಗವನ್ನು ಅರಸಿ ಪಟ್ಟಣವನ್ನು ಸೇರುತ್ತಿದ್ದಾರೆ. ಹಬ್ಬಗಳ ಅವಧಿಯಲ್ಲಿ ಮಾತ್ರ ಊರಿಗೆ ಬರುತ್ತಿರುವ ಕಾರಣ ಈ ಭಾಗದ ಹಳ್ಳಿಗಳು ವೃದ್ದಾಶ್ರಮವಾಗುವ ಸೂಚನೆ ಕಂಡು ಬರುತ್ತಿದೆ. ಇಲ್ಲಿಯ ಯುವಕರು ವಿಶೇóವಾಗಿ ಮಹಿಳೆಯರ ಸ್ವಾಲಂಭನೆಗೆ ಪೂರಕವಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ. ಒಂದೇ ಬೆಳೆಯನ್ನು ಅವಲಂಬಿಸಿರುವ ರೈತರ ಬದುಕು ಕೂಡ ಸುರಕ್ಷಿತವಾಗಿಲ್ಲ ಎಂದೂ ಹೇಳಿದರು.
ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ,ಉಪಾಧ್ಯಕ್ಷೆ ಗೀತಾ ರಮೇಶ್ ತಾಪಂ ಇಒ ಎಂ.ಶೈಲಾ, ಬಿಇಒ ವೈ. ಗಣೇಶ್, ಪಪಂ ಸದಸ್ಯರು ಇದ್ದರು. ಇದೇ ವೇಳೆ ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.