ಸಾರಾಂಶ
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಭಾರತ ಮಾತೆ ಸೇರಿದಂತೆ ಕೃಷ್ಣೆ, ಗಂಗಾ, ನೇತ್ರಾವತಿ, ಭದ್ರಾವತಿ, ಕಾವೇರಿ ನದಿಗಳ ಹೆಸರು ಹೆಣ್ಣು ಮಕ್ಕಳ ಹೆಸರುಗಳಾಗಿದ್ದು, ಹೆಣ್ಣು ಸೃಷ್ಟಿ ಕರ್ತೆ, ಪ್ರತಿಯೊಬ್ಬರೂ ಹೆಣ್ಣನ್ನು ಗೌರವಿಸಬೇಕೆಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಕರೆ ನೀಡಿದರು.ತಾಲೂಕಿನ ಕೆಜಿಎಫ್ ಮುಖ್ಯ ರಸ್ತೆಯ ಕಾಶಿಪುರದಲ್ಲಿ ೧೬ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಬಾಲ ಸ್ನೇಹಿ ಅಂಗನವಾಡಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಗಂಡಸರಿಗಿಂತ ಹೆಂಗಸರು ೭ ಸಾವಿರ ಜಾಸ್ತಿ ಇದ್ದಾರೆ ಎಂದರಲ್ಲದೆ, ವಿಶ್ವ ಮಹಿಳಾ ದಿನಾಚರಣೆ ದಿನದಂದೇ ಅಂಗನವಾಡಿ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.ನಾನು ಜೆಡಿಎಸ್ ಶಾಸಕನಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಎಷ್ಟು ಕೊಡುತ್ತೋ ಅಷ್ಟು ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸದನದಲ್ಲಿ ಹೋರಾಟ ಮಾಡಿ ಅತಿ ಹೆಚ್ಚಿನ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ ಈಗಾಗಲೇ ೧೨೫ ರಸ್ತೆ ಕಾಮಗಾರಿ ನಡೆಸಲು ಟೆಂಡರ್ ಕರೆಯಲಾಗಿದೆ, ನನ್ನ ಅವಧಿಯಲ್ಲಿ ಮಣ್ಣು ರಸ್ತೆ ಇಲ್ಲದಂತೆ ಎಲ್ಲಾ ಗ್ರಾಮಗಳಲ್ಲೂ ರಸ್ತೆ ಕಾಮಗಾರಿಗಳನ್ನು ನಡೆಸುತ್ತೇನೆ, ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ, ಹೈ ಸಿಡಿಪಿಒ ಮಾಸ್ಡ್ ವಿದ್ಯುತ್ ದೀಪ, ಅಂಬೇಡ್ಕರ್ ಸಮುದಾಯ ಭವನ, ಅನುದಾನಿತ ಸರಸ್ವತಿ ವಿದ್ಯಾ ಸಂಸ್ಥೆಗೆ ಒಂದು ಕೊಠಡಿಯನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿದರು.ನನ್ನ ತಾಯಿ ಪ್ರತಿ ವರ್ಷ ತಮಿಳುನಾಡಿನ ಮೇಲ್ ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈಗ ಅವರು ಇಲ್ಲದೇ ಇರುವುದರಿಂದ ಅವರ ನೆನಪಿನಲ್ಲಿ ಕಳೆದ ಏಳು ವರ್ಷಗಳಿಂದ ಕೊಟ್ಟ ಮಾತಿನಂತೆ, ತಾಲೂಕಿನ ಮಹಿಳೆಯರನ್ನು ಓಂಶಕ್ತಿ ದೇವಸ್ಥಾನಕ್ಕೆ ಸ್ವಂತ ಖರ್ಚಿನಿಂದ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಕಳುಹಿಸಿ ಕೊಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಬಜೆಟ್ ಮಂಡನೆಯಲ್ಲಿ ಕೋಲಾರ ಜಿಲ್ಲೆಗೆ ಯಾವುದೇ ಜನಪರ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಎಂದು ಟೀಕಿಸಿದರಲ್ಲದೆ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಅತಿಹೆಚ್ಚು ಅನುದಾನಗಳನ್ನು ನೀಡಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿ ತವರು ಜಿಲ್ಲೆ, ಮೈಸೂರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆಂದು ಟೀಕಿಸಿದರು.ಸಿಡಿಪಿಒ ಶೋಭಾ, ಗ್ರಾಪಂ ಸದಸ್ಯ ಕಾಶಿಪುರ ಮುನಿಯಪ್ಪ, ಜೆಡಿಎಸ್ ತಾಲೂಕು ಕಾರ್ಯದರ್ಶಿ ನಲ್ಲೂರು ರಘುಪತಿ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಎಂಎಸ್ ಶ್ರೀನಿವಾಸ್ ರೆಡ್ಡಿ, ಬಲ್ಲ ಹರೀಶ್ ಯಾದವ್, ಬೆಳಗಾನಹಳ್ಳಿ ವೆಂಕಟರಾಮಪ್ಪ, ಬಲ್ಲ ಗ್ರಾಪಂ ಅಧ್ಯಕ್ಷ ವಸಂತ ಆನಂದ್, ಅಂಗೊಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಅಮರಾವತಿ, ಕೇಶವ್ ರೆಡ್ಡಿ, ಗ್ರಾಪಂ ಪಿಡಿಒ ನಂದೀಶ್, ಬಂಡಹಳ್ಳಿ ಲಕ್ಷ್ಮೀನಾರಾಯಣ, ಮುಖ್ಯ ಶಿಕ್ಷಕ ಎ.ಎಚ್.ನಾರಾಯಣಸ್ವಾಮಿ, ಕೃಷ್ಣಪ್ಪ, ಶಂಕರೇಗೌಡ, ವಿಶ್ವನಾಥ್ ಇದ್ದರು.