ಮುಂಡರಗಿ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಾರಂಭವಾಗಿದ್ದು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಸ್ಕರಣೆಗೆ ಎಲ್ಲರೂ ಸ್ಪಂದಿಸಬೇಕು ಎಂದು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಮಂಗಳವಾರ ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಎನುಮೆರೇಶನ್ ಫಾರ್ಮ್(ಗಣತಿ ನಮೂನೆ) ಭರ್ತಿ ಮಾಡಿ ಬೂತ್ ಮಟ್ಟದ ಅಧಿಕಾರಿಗೆ ನೀಡಿ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಿದರು.ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಜು. 29ರ ವರೆಗೆ ಮನೆಗೆ ಭೇಟಿ ನೀಡಿ ಮತದಾರ ಪಟ್ಟಿಯಲ್ಲಿ ಹೆಸರಿರುವ ಮತದಾರರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಎನುಮೆರೇಶನ್ ಫಾರ್ಮ್(ಗಣತಿ ನಮೂನೆ) ನೀಡಲಿದ್ದಾರೆ. ಮತದಾರರು ಫಾರ್ಮ್ ಭರ್ತಿ ಮಾಡಿ ಬಿಎಲ್ಒಗಳಿಗೆ ನೀಡಬೇಕು ಎಂದರು.
ಈ ಕಾರ್ಯವು ಎಲ್ಲೆಡೆ ಯಶಸ್ವಿಯಾಗಿ ಜರುಗುವ ಮೂಲಕ ಮುಂಬರುವ ವರ್ಷಗಳಲ್ಲಿ ಇದರ ಯಶಸ್ಸು ಎಲ್ಲ ವರ್ಗದ ಜನಾಂಗಕ್ಕೂ ದೊರೆತಾಗಿ ದೇಶದ ವಿಶೇಷ ಅಭಿವೃದ್ಧಿಗೆ ಕಾರಣವಾಗುತ್ತದೆ. ಕೆಲವು ಮತದಾರರು ಎರಡ್ಮೂರು ಕಡೆ ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಇನ್ನು ನಿಧನರಾದವರ ಹೆಸರು ಮತದಾರರ ಪಟ್ಟಿಯಲ್ಲಿದ್ದು, ಅವರ ಹೆಸರಿನಲ್ಲಿ ಇನ್ಯಾರೋ ಮತದಾನ ಮಾಡುತ್ತಾರೆ. ಇಂತಹ ಗೊಂದಲಗಳಿಗೆ ತೆರೆ ಎಳೆಯುವ ಕಾರ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ ಎಂದರು.ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮಾತನಾಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಾರಂಭವಾಗಿದ್ದು, ಅದಕ್ಕಾಗಿ ತಾಲೂಕಿನಾದ್ಯಂತ ಎಲ್ಲ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಮನೆ ಮನೆಗೆ ಭೇಟಿ ನೀಡಿ ಕುಟುಂಬದಲ್ಲಿರುವ ಎಲ್ಲ ಮತದಾರರಿಗೆ ಎನುಮೆರೇಶನ್ ಫಾರ್ಮ್(ಗಣತಿ ನಮೂನೆ) ನೀಡಲಿದ್ದಾರೆ. ಎಲ್ಲ ಮತದಾರರು ಎನುಮೆರೇಶನ್ ಫಾರ್ಮ್(ಗಣತಿ ನಮೂನೆ) ಭರ್ತಿ ಮಾಡಬೇಕು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹಳೆಯ ಫೋಟೋ ಇದ್ದರೆ ಅದಕ್ಕೆ ಇತ್ತೀಚಿನ ಭಾವಚಿತ್ರ ಹಚ್ಚಿ ತಮ್ಮದೊಂದು ಸಹಿ ಮಾಡಿ ನಂತರ ಬಿಎಲ್ಒ ಅವರ ಒಂದು ಸಹಿ ಪಡೆದುಕೊಂಡು ಒಂದು ಗಣತಿ ನಮೂನೆ ಬಿಎಲ್ಒ ಅವರಿಗೆ ನೀಡಿ ಮತ್ತೊಂದನ್ನು ಮತದಾರರು ತಮ್ಮ ಹತ್ತಿರವೇ ಇಟ್ಟುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ಬೂತ್ ಮಟ್ಟದ ಅಧಿಕಾರಿ ಬಸವರಾಜ ಇಟಗಿ, ವಿಶ್ವನಾಥ ಉಳ್ಳಾಗಡ್ಡಿ, ಎಸ್.ಡಿ. ಬಸೇಗೌಡ್ರ, ವಿ.ಎಚ್. ಹೊಳೆಯಮ್ಮನವರ, ಎಸ್.ಸಿ. ಚಕ್ಕಡಿಮಠ, ಸುಭಾಶ್ಟಂದ್ರ ಹೊಸಮನಿ ಉಪಸ್ಥಿತರಿದ್ದರು.