ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಗಣಿಗಾರಿಕೆ, ಮರ ಹನನ ಮುಂತಾದ ಪರಿಸರ ಹಾನಿಯಿಂದಾಗಿ ದಿನೇ ದಿನೇ ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರದ ಉಳಿವಿಗಾಗಿ ಶ್ರಮಿಸಬೇಕಾಗುತ್ತದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಮೋಹನ್‍ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಶನಿವಾರ ಕೊಡಗು-ಹಾಸನ ಜಿಲ್ಲಾ ಗಡಿಭಾಗ ಹೊಸೂರು ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಕೊಡಗು-ಹಾಸನ ಪಶ್ಚಿಮ ಘಟ್ಟ ಸಾಲಿಗೆ ಸೇರಿದ ಹೊಸಕೋಟೆ ಬೆಟ್ಟದ ರೋಡಿಕ್ ಕಾಫಿ ತೋಟದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವ ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳು, ಪರಿಸರ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪರಿಸರವನ್ನು ಉಳಿಸುವ ಮೂಲಕ ನಾವು ಕೊಡುಗೆಯನ್ನು ನೀಡಿದರೆ ಪರಿಸರವು ನಮಗೆ ಉತ್ತಮ ಗಾಳಿ, ಮಳೆಯಿಂದ ಕೂಡಿದ ಪೃಕೃತಿಯ ಕೊಡುಗೆಯನ್ನು ಕೊಡುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲಾರೂ ಪರಿಸರವನ್ನು ಸಂರಕ್ಷಣೆ ಮಾಡಬೇಕಿದೆ. ಪಶ್ಚಿಮ ಘಟ್ಟ ಸಾಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಲು ಪ್ರತಿಯೊಬ್ಬರು ಹೋರಾಟಗಾರರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಮಾತನಾಡಿ, ಪರಿಸರ ಹಾನಿಯು ಜಾಗತಿಕ ತುರ್ತು ಪರಿಸ್ಥಿತಿಯ ಅಸ್ತಿತ್ವವಾಗಿರುವುದರಿಂದ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಹೋರಾಟ ಮಾಡುವ ಮೂಲಕ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಕೊಡಗು ಕಾವೇರಿ ಸೇನೆಯ ರವಿಚಂಗಪ್ಪ ಮಾತನಾಡಿ, ಪಶ್ಚಿಮ ಘಟ್ಟವನ್ನು ಕೊಳ್ಳೆ ಹೊಡೆಯುವಲ್ಲಿ ಕೆಲವು ಅರಣ್ಯ ಇಲಾಖೆ, ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಸರ್ಕಾರಿ ಅಧಿಕಾರಿಗಳು ಶಾಮಿಲಾಗುತ್ತಾರೆ. ಇದರಿಂದ ಪಶ್ಚಿಮ ಘಟ್ಟ ಸಾಲಿನಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದರು. ಕೊಡಗು-ಹಾಸನ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ನಡೆಯುವ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದರು.ಹೋರಾಟಗಾರ ಬೆಕ್ಕಿನಳ್ಳಿ ನಾಗರಾಜ್ ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರ ಉಳಿಯಬೇಕಾದರೆ ನಾವು ಗಣಿಗಾರಿಕೆ ವಿರುದ್ಧ ಚಳವಳಿಯ ಹಾದಿಯನ್ನು ಹಿಡಿಯಬೇಕು. ಗಣಿಗಾರಿಕೆಯನ್ನು ನಿಲ್ಲಿಸುವರಿಗೂ ಹೋರಾಟವನ್ನು ನಿಲ್ಲಿಸಬಾರದು. ಈ ಹೋರಾಟದಲ್ಲಿ ಪ್ರತಿಯೊಬ್ಬರು ತನ್ನ ಜವಾಬ್ದಾರಿ ಎಂದು ಭಾವಿಸಿ ಹೋರಾಟ ಸಹಕರಿಸುವಂತೆ ಮನವಿ ಮಾಡಿದರು.
ಹೊಸೂರು ಜುಮ್ಮಾ ಮಸೀದಿ ಧರ್ಮಗುರು ಶಾಫಿ ಸ ಅದಿ ಮಾತನಾಡಿ, ಪ್ರತಿಯೊಂದು ಧರ್ಮದಲ್ಲಿ ಪ್ರಕೃತಿಗೆ ಪೂಜ್ಯ ರೀತಿಯ ಸ್ಥಾನ ಮಾನಗಳನ್ನು ಕೊಟ್ಟಿದೆ. ಪರಿಸರವನ್ನು ನಾಶ ಮಾಡಲು ಯಾವ ಧರ್ಮದಲ್ಲೂ ಹೇಳಿಲ್ಲ. ನಾವೆಲ್ಲರೂ ಜೀವಿಸುವುದಕ್ಕೆ ಪೃಕೃತಿ ಬೇಕು ಹೀಗಿದ್ದರೂ ಪರಿಸರದ ಮೇಲೆ ಹಾನಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಸಾಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಲು ನಾವೆಲ್ಲಾರೂ ಜಾತಿ, ಧರ್ಮ ಮರೆತು ಸಹಕಾರ ನೀಡಬೇಕಾಗುತ್ತದೆ ಎಂದರು.ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಪರಿಸರ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗಿ ಬೇಸಿಗೆಯಲ್ಲಿ ಅತ್ಯಂತ ಉಷ್ಣಾಂಶ ಏರಿಕೆಯಾಗುತ್ತಿದೆ. ಇದರಿಂದ ಭೂಕಂಪವಾಗಲು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟವನ್ನು ಉಳಿಸಲು ಎಲ್ಲರೂ ಹೋರಾಟಗಾರರಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸೋಮವಾರಪೇಟೆ ಕಾವೇರಿ ಸೇನೆಯ ಹೊಸಬೀಡು ಶಶಿ, ಹೋರಾಟಗಾರ ಗೊದ್ದೂರು ಉಮೇಶ್ ಮಾತನಾಡಿದರು. ಹೋರಾಟಗಾರ ಪ್ರತಿಭಟನಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಭೆಯಲ್ಲಿ ಈ ಹಿಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಗಣಿಗಾರಿಕೆಯನ್ನು ನಿಲ್ಲಿಸದಿದ್ದರೆ ಚುನಾವಣೆ ಬಹಿಷ್ಕರಿಸುವಂತೆ ತೀರ್ಮಾನಿಸಿದ್ದ ಸಂದರ್ಭದಲ್ಲಿ ಅಧಿಕಾರಿಗಳು ತಾತ್ಕಾಲಿಕವಾಗಿ ಗಣಿಗಾರಿಕೆಯನ್ನು ನಿಲ್ಲಿಸಿದ್ದರು. ಚುನಾವಣೆ ಮುಗಿದ ನಂತರ ಈಗ ಮತ್ತೆ ಗಣಿಗಾರಿಕೆಗೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಗುತ್ತಿಗೆದಾರರು ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ನಾವು ಪ್ರತಿಭಟನೆ ಮೂಲಕ ಗಣಿಗಾರಿಕೆಯನ್ನು ಈಗಲೇ ನಿಲ್ಲಿಸಬೇಕು ರಸ್ತೆ ತಡೆ, ಗಣಿಗಾರಿಕೆ ಅನುಮತಿ ನಾಮಫಲಕವನ್ನು ತೆರವುಗೊಳಿಸುವುದು ಹೀಗೆ ಮಾಡುವುದರ ಮೂಲಕ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಹೊಸೂರು ರಮೇಶ್, ಪುಟ್ಟೆಗೌಡ, ಹೊಸೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಮಂಜುನಾಥ್, ಉಪಾಧ್ಯಕ್ಷೆ ಜಾನಕಿ, ಸಮಾಜ ಸೇವಕ ಕಾಮನಹಳ್ಳಿ ಕೀರ್ತಿ ಮುಂತಾದವರು ಇದ್ದರು.ಕೊಡಗು-ಹಾಸನ ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿಯ ಹೊಸೂರು, ಚಂಗಡಹಳ್ಳಿ, ವನಗೂರು, ಯಸಳೂರು ಮತ್ತು ಕೊಡಗು ಜಿಲ್ಲೆಯ ತೋಳೂರು ಶೆಟ್ಟಳ್ಳಿ ಗ್ರಾ.ಪಂ.ಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.