ಸಾರಾಂಶ
ಶೃಂಗೇರಿ: ಉತ್ತಮ ಆರೋಗ್ಯದಿಂದ ನೆಮ್ಮದಿ ಜೀವನ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ನೆಮ್ಮಾರು ಗ್ರಾಪಂ ಸದಸ್ಯ ಎಚ್.ಜಿ.ಪುಟ್ಟಪ್ಪ ಹೆಗ್ಡೆ ತಿಳಿಸಿದರು.
ತಾಲೂಕಿನ ನೆಮ್ಮಾರು ಪಂಚಾಯಿತಿ ನೆಮ್ಮಾರು ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಮನುಷ್ಯನಿಗೆ ಎಷ್ಟೇ ಆಸ್ತಿ, ಹಣ, ಇದ್ದರೂ ನೆಮ್ಮದಿ ಮುಖ್ಯ, ನೆಮ್ಮದಿ ಕೇವಲ ಹಣ, ಆಸ್ತಿಯಿಂದ ಸಿಗುವುದಿಲ್ಲ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನೆಮ್ಮದಿ ಸಿಗುತ್ತದೆ ಎಂದರು.ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ತಪಾಸಣೆ ಶಿಬಿರಗಳು ನಡೆಯುವುದರಿಂದ ಜನರಿಗೆ ಸಾಕಷ್ಟು ಪ್ರಯೋಜನ ವಾಗಲಿದೆ. ವಿವಿಧ ತಜ್ಞವೈದ್ಯರು ಪಾಲ್ಗೊಳ್ಳುವುದರಿಂದ ಜನರಿಗೆ ಇದರ ಉಪಯೋಗ ಸಿಗಲಿದೆ. ಆರೋಗ್ಯ ಇಲಾಖೆ ಸಹಕಾರದಿಂದ ಇನ್ನಷ್ಟು ಶಿಬಿರಗಳು ನಡೆಯಬೇಕು. ಜನರು ಇದರ ಸದ್ಭಳಕೆ ಮಾಡಿಕೊಂಡಲ್ಲಿ ಕಾರ್ಯಕ್ರಮ ಯಶಸ್ಸು ಗಳಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಡಾ .ದಯಾನಂದ್,ರವಿಶಂಕರ್ ಹೊಸದೇವರ ಹಡ್ಲುರವರನ್ನು ಸನ್ಮಾನಿಸಲಾಯಿತು.ಶಿಬಿರದಲ್ಲಿ 14 ಶಿಬಿರಾರ್ಥಿಗಳಿಗೆ ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಮಕ್ಕಳ ತಜ್ಞರು, ಪ್ರಸೂತಿ ತಜ್ಞರು, ಮೂಳೆ, ಚರ್ಮ ರೋಗ ತಜ್ಞರು ಸೇರಿದಂತೆ ವಿವಿಧ ತಜ್ಞವೈದ್ಯರು ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿ ಸಲಹೆ ನೀಡಿದರು. ಪಿಡಿಒ ಶ್ರೀಕಾಂತಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷೆ ವಾಣಿ, ಮಾಜಿ ಅಧ್ಯಕ್ಷೆ ಲೀಲಾವತಿ ರವಿಶಂಕರ್, ಉಮೇಶ್ ನಾಯ್ಕ, ಜ್ಯೋತಿ ಚಂದ್ರಶೇಖರ್,ಇಒ ಸುದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.