ಸಾರಾಂಶ
ಲಕ್ಷ್ಮೇಶ್ವರ: ವಿವಿಧತೆಯಲ್ಲಿ ಏಕತೆ ಹೊಂದಿದ ಶ್ರೇಷ್ಠವಾದ ಭಾರತದಲ್ಲಿ ಧರ್ಮ, ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ಉಳಿಸಲು ಮತ್ತು ಸಮಾಜದ ಏಳಿಗೆಗಾಗಿ ಸಮರ್ಪಿಸಿಕೊಂಡ ಶರಣರು, ಸಂತರು, ಧರ್ಮ ಗುರುಗಳು, ಸ್ವಾತಂತ್ರ್ಯ ಹೋರಾಟಗಾರರು ತೋರಿದ ಮಾರ್ಗದಲ್ಲಿ ಎಲ್ಲರೂ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗಿದೆ ಎಂದು ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಶನಿವಾರ ತಾಲೂಕಿನ ಆದ್ರಳ್ಳಿ ತಾಂಡಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೇವಾಲಾಲ ಮಹಾರಾಜರ ೨೮೬ನೇ ಜಯಂತ್ಯುತ್ಸವದ ಸಾನಿಧ್ಯವಹಿಸಿ ಮಾತನಾಡಿ, ಸ್ವಧರ್ಮನಿಷ್ಠೆ ಪರಧರ್ಮ ಸಹಿಷ್ಠುತೆ ಹೊಂದಿದ ಹಿಂದೂಗಳಲ್ಲೇ ಒಡಕು ಮೂಡಿಸಿ ಧರ್ಮ ಹಾಳು ಮಾಡುವವರ ಬಗ್ಗೆ ಎಚ್ಚರಗೊಳ್ಳಬೇಕಿದೆ. ಯಾವುದೇ ಆಸೆ-ಆಮಿಷ, ಕ್ಷಣಿಕ ಸುಖಕ್ಕಾಗಿ ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವ ಕಾರ್ಯ ಹೆತ್ತತಾಯಿಗೆ ಮಾಡಿದ ದ್ರೋಹವಾಗಿದೆ. ಧರ್ಮ, ಸಮಾಜದ ರಕ್ಷಣೆ, ಶ್ರೇಯೋಭಿವೃದ್ಧಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿರುವ ಆದ್ರಳ್ಳಿಯ ಗವಿಮಠದ ಕುಮಾರ ಮಹಾರಾಜರ ಬೆನ್ನಿಗೆ ಸಮಾಜ ನಿಲ್ಲಬೇಕು ಎಂದರು.ಆದ್ರಳ್ಳಿ ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಬಂಜಾರ ಸಮಾಜದ ಅಮಾಯಕ, ಮುಗ್ಧ ಜನರನ್ನು ಮರಳು ಮಾಡಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ರಾಜಕಾರಣಿಗಳು, ಸಮಾಜದ ಮುಖಂಡರ ಬಗ್ಗೆ ಸಮಾಜ ಬಾಂಧವರು ಜಾಗೃತರಾಗಬೇಕು. ತಾಂಡಾಗಳಲ್ಲಿನ ಜನರು ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಗೋವಾದಂತಹ ಮಾಯಾಲೋಕಕ್ಕೆ ತುತ್ತಿನಚೀಲ ತುಂಬಿಕೊಳ್ಳಲು ವಲಸೆ ಹೋಗಿ ಮತಾಂತರಕ್ಕೆ ಬಲಿಯಾಗುತ್ತಿದ್ದಾರೆ. ಆದ್ರಳ್ಳಿ ತಾಂಡಾದ ಸುತ್ತಲೂ ಅನೇಕ ವರ್ಷಗಳಿಂದ ರಾಜಾರೋಷವಾಗಿ ಅಕ್ರಮ ಕಲ್ಲು,ಮರಳು ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಅಟ್ಟಹಾಸದಿಂದ ಜನರ ಆರೋಗ್ಯ, ನೆಮ್ಮದಿ, ನಿದ್ದೆ, ಸಂತೋಷ ಕಸಿದಿದೆ. ಆದರೆ ಸಮಾಜದ ಹೆಸರಿನಲ್ಲಿ ತಮ್ಮ ಬೇಳೆಬೇಯಿಸಿಕೊಳ್ಳುತ್ತಿರುವ ಸಮಾಜದ ಸಂಘದವರು, ರಾಜಕಾರಣಿಗಳು, ಅಧಿಕಾರಿಗಳು ಅಕ್ರಮ ದಂಧೆಕೋರರ ಶ್ರೀರಕ್ಷೆಗೆ ನಿಂತಿದ್ದಾರೆ. ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ನಡೆಯುತ್ತಿರುವ ಅಕ್ರಮ-ಅನ್ಯಾಯದ ವಿರುದ್ಧ ತಾವು ಎಂತಹ ಹೋರಾಟ-ತ್ಯಾಗಕ್ಕೂ ಸಿದ್ಧ ಎಂದರು.ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, “ಆದ್ರಳ್ಳಿ ತಾಂಡಾದ ಸರ್ಕಾರಿ ಜಾಗೆಯಲ್ಲಿ ಚರ್ಚ ನಿರ್ಮಿಸಿಕೊಂಡು ಇಲ್ಲಿನ ಅಮಾಯಕ ಜನರನ್ನು ಮತಾಂತರ ಮಾಡುತ್ತಿರುವ ಮತಾಂಧರಿಗೆ ಸಭೆಯ ಮೂಲಕ ಕೊನೆಯ ಎಚ್ಚರಿಕೆ. ಇನ್ನು ೧೫ ದಿನಗಳಲ್ಲಿ ಚರ್ಚ್ ಖಾಲಿ ಮಾಡಿ ಓಡಿ ಹೋಗಬೇಕು. ಇಲ್ಲದಿದ್ದರೆ ಶ್ರೀರಾಮಸೇನೆ, ಬಂಜಾರ ಸೇನೆಯ ಕಾರ್ಯಕರ್ತರು ಶ್ರೀಗಳ ನೇತೃತ್ವದಲ್ಲಿ ಚರ್ಚ ನೆಲಸಮಗೊಳಿಸುತ್ತೇವೆ. ಈ ಬಗ್ಗೆ ತಾಲೂಕಾಡಳಿತ, ಪೊಲೀಸ್ ಮುಂಜಾಗ್ರತಾ ಕ್ರಮವಾಗಿ ಚರ್ಚ್ ತೆರವುಗೊಳಿಸಬೇಕು ಎಂಬ ನಿರ್ಧಾರಕ್ಕೆ ಸಭೆಯಲ್ಲಿ ಒಮ್ಮತದ ಕೂಗು ಕೇಳಿ ಬಂದಿತು.ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಅವರು, ಸಮಾಜದ ಸಹಕಾರ ಪಡೆದು ತಮ್ಮ ಕಾರ್ಯ ಸಾಧಿಸಿಕೊಂಡು ತಿರುಗಿ ಬೀಳುವ, ನಿರ್ಲಕ್ಷಿಸುವವರಿಗೆ ಸಮಾಜ ತಕ್ಕ ಪಾಠ ಕಲಿಸಬೇಕು ಎಂದರು. ಸಾನಿಧ್ಯವಹಿಸಿದ್ದ ಕುಂದಗೋಳದ ಅಭಿನವ ಬಸವಣ್ಣಜ್ಜನವರು ಧರ್ಮ ಉಳಿಸುವ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ ಸಮಾಜದ ಸೇವೆಗೆ ಸದಾ ಬದ್ಧ ಎಂದರು. ಮಾಜಿ ಶಾಸಕ ಬಸವರಾಜ ನಾಯ್ಕ, ರಾಜು ಖಾನಪ್ಪನವರ ಮಾತನಾಡಿದರು. ಕಾರ್ಯಕ್ರಮ ಪೂರ್ವದಲ್ಲಿ ಸೇವಾಲಾಲ ಮಹಾರಾಜರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ ಮಾಜಿ ಶಾಸಕ ಜಿ.ಎಸ್ ಗಡ್ಡದೇವರಮಠ, ಹುಚ್ಚಪ್ಪ ಸಂಕದ, ಗೀತಾ ನಾಯಕ, ಡಾ. ವೆಂಕಟೇಶ ರಾಠೋಡ, ಗಿರೀಶ ಲಮಾಣಿ, ಸುರೇಶ ನಂದೆಣ್ಣವರ, ಸೋಮು ಲಮಾಣಿ, ಗುರು ತೀರ್ಲಾಪುರ, ಶೇಖಪ್ಪ ಲಮಾಣಿ ಸೇರಿ ಆದರಳ್ಳಿ ಮತ್ತು ಸುತ್ತಲಿನ ತಾಂಡಾಗಳ ನಾಯಕ್, ಡಾವ್, ಕಾರಬಾರಿ ಗುರು-ಹಿರಿಯರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.