ಸಾರಾಂಶ
ಯಲ್ಲಾಪುರ: ನಮ್ಮ ಭಾರತೀಯ ಪರಂಪರೆಯಲ್ಲಿ ಹಿರಿಯರಿಗೆ ಅತ್ಯಂತ ಮಹತ್ವ ನೀಡಲಾಗುತ್ತಿದೆ. ಅವರ ಮಾರ್ಗದರ್ಶನದ ಜತೆಗೆ ನಮ್ಮ ಮೌಲ್ಯ, ಸಂಸ್ಕೃತಿಯನ್ನು ಮುನ್ನಡೆಸುವ ಉದ್ದೇಶದಿಂದಲೇ ಹಿರಿಯ ನಾಗರಿಕರ ದಿನವನ್ನು ಆಚರಿಸುತ್ತಿದ್ದೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಕಾನೂನು ಸೇವಾ ಸಮಿತಿ ತಾಲೂಕಾಧ್ಯಕ್ಷರೂ ಆದ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ ತಿಳಿಸಿದರು.ಅ. ೧೦ರಂದು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಿವಿಧ ಇಲಾಖೆಗಳು ಹಾಗೂ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ತಾಲೂಕು ಆಸ್ಪತ್ರೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಈ ದಿನ ವಿಶ್ವ ಹಿರಿಯ ನಾಗರಿಕರ ದಿನ. ಆ ನೆಲೆಯಲ್ಲಿ ಎಲ್ಲೆಡೆ ಹಿರಿಯ ನಾಗರಿಕರ ಕುರಿತು ಯುವಜನಾಂಗ ಗೌರವದಿಂದ ಕಾಣಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದೆ. ಅಲ್ಲದೇ, ವಿಶ್ವ ಮಾನಸಿಕ ಆರೋಗ್ಯ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ದಿನವನ್ನು ಆಚರಿಸಲಾಗಿದೆ. ತನ್ಮೂಲಕ ಹಿರಿಯ ನಾಗರಿಕರ ಸುರಕ್ಷತೆಗಾಗಿ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಮಾನಸಿಕ ಅಸ್ವಸ್ಥತೆಯುಳ್ಳ ಹಿರಿಯರನ್ನು ಕೀಳಾಗಿ ಕಾಣಬಾರದು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿ, ಅವರನ್ನು ಗೌರವದಿಂದ ಕಾಣಬೇಕು ಎಂದರು. ಅಪರ ಸರ್ಕಾರಿ ನ್ಯಾಯವಾದಿ ಎನ್.ಟಿ. ಗಾಂವ್ಕರ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ನಾಗರಿಕರಿಗೆ ಅಪಾರ ಗೌರವವಿದೆ. ಸಮಾಜದಲ್ಲಿ ನೈತಿಕತೆ ಕಡಿಮೆಯಾಗಿ, ಅನೈತಿಕತೆ ಹೆಚ್ಚಾದಾಗ ಸೂಕ್ತ ಮಾರ್ಗದರ್ಶನವನ್ನು ಹಿರಿಯರಿಂದ ಪಡೆಯಬೇಕು. ಯುವಜನಾಂಗ ಹಿರಿಯರನ್ನು ನೋಡಿಕೊಳ್ಳುವ ಹೊಣೆಗಾರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಅದರ ಹಕ್ಕನ್ನು ಕಾನೂನು ರೀತಿ ನೀಡಲಾಗಿದೆ ಎಂದರು. ವಕೀಲ ಆರ್.ಕೆ. ಭಟ್ಟ ಮಾತನಾಡಿ, ಅವಿಭಕ್ತ ಕುಟುಂಬ ಕಡಿಮೆಯಾಗಿ, ಇದ್ದ ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗುವುದರಿಂದ ನಾವು ಎಲ್ಲೆಡೆ ವೃದ್ಧಾಶ್ರಮಗಳನ್ನು ಕಾಣುವಂತಾಗಿದೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದರು. ತಾಲೂಕು ಆಸ್ಪತ್ರೆಯ ತಜ್ಞ ವೈದ್ಯ ಡಾ. ಸೌಮ್ಯ ಕೆ.ವಿ. ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಅಲ್ಲದೇ, ಮಕ್ಕಳ ಮೇಲೆ ಪಾಲಕರು ಅತಿಯಾದ ಒತ್ತಡ ಹೇರಬಾರದು. ಮಕ್ಕಳಿಗೆ ಕೇವಲ ಗೆಲುವೊಂದೇ ಅಲ್ಲ, ಸೋಲಿನ ಅನುಭವವನ್ನೂ ತಿಳಿಸಬೇಕು. ಜತೆಗೆ ಯೋಗಾಸನ, ಪ್ರಾಣಾಯಾಮ, ಸಾತ್ವಿಕ ಆಹಾರ, ಪಶು, ಪ್ರಾಣಿ, ಪಕ್ಷಗಳ ಜತೆ ಕಾಲ ಕಳೆಯುವುದರಿಂದ ನಮ್ಮ ಮಾನಸಿಕ ಆರೋಗ್ಯ ವೃದ್ಧಿಸಲು ಸಾಧ್ಯ ಎಂದರು.
ಮಹಿಳಾ ಮತ್ತು ಶಿಶು ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ಮಾತನಾಡಿ, ಹೆಣ್ಣುಮಕ್ಕಳನ್ನು ಅವರ ಸಾಧನೆಗೆ ಪ್ರೋತ್ಸಾಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ವಸತಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪಾಲಕರು ವೃದ್ಧಾಶ್ರಮ ಸೇರುತ್ತಿದ್ದಾರೆ. ಕೌಟುಂಬಿಕ ವ್ಯವಸ್ಥೆ ಸುಸ್ಥಿತಿಯಲ್ಲಿರಬೇಕು. ನಮ್ಮ ಪೋಷಕರು ನಮ್ಮನ್ನು ನೋಡಿಕೊಂಡಂತೆ ನಾವು ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಜಿ. ಭಟ್ಟ, ಪೊಲೀಸ್ ಉಪನಿರೀಕ್ಷಕ ಮಹಾವೀರ ಕಾಂಬಳೆ, ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಜೋಗಳೆಕರ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕಿ ಜ್ಯೋತಿ ಬಿ. ನರೋಟ, ಪ್ಯಾನಲ್ ವಕೀಲೆ ಬೇಬಿ ಅಮೀನಾ ವೇದಿಕೆಯಲ್ಲಿದ್ದರು. ಅಂಗನವಾಡಿ ಕಾರ್ಯಕರ್ತೆ ರೇಣುಕಾ ಪ್ರಾರ್ಥಿಸಿದರು. ಹಿರಿಯ ಸಹಾಯಕ ಆರೋಗ್ಯಾಧಿಕಾರಿ ಮಹೇಶ ತಾಳಿಕೋಟೆ ಸ್ವಾಗತಿಸಿದರು. ಶಿಕ್ಷಕರಾದ ಸುಧಾಕರ ನಾಯಕ ನಿರ್ವಹಿಸಿದರು. ಸಂಜೀವ ಹೊಸ್ಕೇರಿ ವಂದಿಸಿದರು.