ಡಿ ದೇವರಾಜು ಅರಸು ರವರು ಮುಖ್ಯಮಂತ್ರಿಯಾಗಿದ್ದಾಗ 63 ಜನರು ಶಾಸಕರಾಗಿ ಆಯ್ಕೆಯಾಗಿದ್ದರು. ಹಿಂದುಳಿದ ವರ್ಗಗಳು ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ರವರ ವಿಚಾರಗಳನ್ನು ತಿಳಿದು ಕೊಳ್ಳುವ ಮೂಲಕ ಅಹಿಂದ ವರ್ಗದವರು ಒಗ್ಗಟ್ಟಿನಿಂದ ಇರಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಹಿಂದುಳಿದ ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಮುನ್ನಡೆಯಬೇಕು ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್. ಸಂದೇಶ್ ಕರೆ ನೀಡಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ದಲಿತ ಹಾಗೂ ಎಲ್ಲಾ ವರ್ಗದ ಹಿಂದುಳಿದ ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡಿದ ಮಹಾನ್ ನಾಯಕರು. ನಾವು ಮೊದಲು ಅಂಬೇಡ್ಕರ್ ರವರ ವಿಚಾರವನ್ನು ಹಿಂದುಳಿದ ವರ್ಗಗಳು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಡಿ ದೇವರಾಜು ಅರಸು ರವರು ಮುಖ್ಯಮಂತ್ರಿಯಾಗಿದ್ದಾಗ 63 ಜನರು ಶಾಸಕರಾಗಿ ಆಯ್ಕೆಯಾಗಿದ್ದರು. ಹಿಂದುಳಿದ ವರ್ಗಗಳು ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ರವರ ವಿಚಾರಗಳನ್ನು ತಿಳಿದು ಕೊಳ್ಳುವ ಮೂಲಕ ಅಹಿಂದ ವರ್ಗದವರು ಒಗ್ಗಟ್ಟಿನಿಂದ ಇರಬೇಕು ಎಂದು ಸಲಹೆ ನೀಡಿದರು.ಕುಂಬಾರ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಶೇ.3ರಷ್ಟು ಮೇಲ್ವರ್ಗದ ಜನರು ಮೀಸಲಾತಿ ವಿಚಾರ ಬಗ್ಗೆ ಮಾತನಾಡುವ ಜೊತೆಗೆ ಯುವ ಸಮೂಹವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದರೆ, ಅವರು ಪಡೆದುಕೊಳ್ಳುತ್ತಿರುವ ಮೀಸಲಾತಿಯನ್ನು ಬಿಟ್ಟು ಬಿಡಲಿ ಎಂದರು.
ದಲಿತ, ಹಿಂದುಳಿದ ವರ್ಗದ, ಅಲ್ಪಸಂಖ್ಯಾತರ ವರ್ಗದವರು ಮೀಸಲಾತಿ ಪಡೆಯುವವರ ಬಗ್ಗೆ ಮಾತನಾಡುವ ಮುನ್ನ ಅವರು ಅತ್ಮ ವಿಮರ್ಶೆ ಮಾಡಿಕೊಳ್ಳಲಿ. ಶೋಷಿತ ವರ್ಗಗಳಾದ ನಾವು ಶೇ.97ರಷ್ಷು ಇದ್ದೇವೆ. ನಾವು ಪಡೆಯುತ್ತಿರುವ ಮೀಸಲಾತಿಗೆ ತಡೆ ಒಡ್ಡಿದ್ದಾರೆ. ಅದರ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು,ಕಾರ್ಯಕ್ರಮಕ್ಕೆ ಮುನ್ನ ನಗರಸಭೆ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ವೇದಿಕೆ ತಾಲೂಕು ಸಂಚಾಲಕರಾದ ಶಶಿಕುಮಾರ್ ಪಿ., ತಾಲೂಕು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷ ಡಿ.ಸಿ.ಮಹೇಂದ್ರ, ಅಹಿಂದ ಸಂರಕ್ಷಣಾ ವೇದಿಕೆ ಅಧ್ಯಕ್ಷ ಮಲವರಾಜು, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಜಿಲ್ಲಾಧ್ಯಕ್ಷ ತೈಲೂರು ಆನಂದಾಚಾರ್, ಡಾ.ದಾಕ್ಷಾಯಿಣಿ ವೆಂಕಟೇಶ್, ಮಂಚಶೆಟ್ಟಿ, ಶಿಕ್ಷಕರಾದ ಕೆ.ಜೆ. ಗೋವಿಂದ ರಾಜ್, ತೂಬಿನಕೆರೆ ರಮೇಶ್ ಒಬಳಯ್ಯ, ಜಯರಾಮಯ್ಯ, ಧನಂಜಯ, ಮಹದೇವಯ್ಯ, ಆಶಿಷ್ ಪಾಷಾ, ಚಂದ್ರಶೇಖರ್, ನಾಗರಾಜ್, ಪ್ರದೀಪ್, ಆನಂದ, ಕೆ.ಟಿ. ಜಗನ್ನಾಥ್, ಬನ್ನಹಳ್ಳಿ ಸಿದ್ದಾಪ್ಪಾಜಿ ಇತರರು ಉಪಸ್ಥಿತರಿದ್ದರು.