ಯುವಕರಲ್ಲಿ ದೇಶದ ಇತಿಹಾಸ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವಸಂಸತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಜಾಪ್ರಭುತ್ವದ ಆಶಯಗಳನ್ನು ತಿಳಿಸುವ ಕೆಲಸವಾಗುತ್ತಿದೆ.
ಧಾರವಾಡ:
ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಅದರ ಬೇರುಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಹೇಳಿದರು. ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಚಾಲನಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯುವಕರಲ್ಲಿ ದೇಶದ ಇತಿಹಾಸ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವಸಂಸತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಜಾಪ್ರಭುತ್ವದ ಆಶಯಗಳನ್ನು ತಿಳಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ, ಭಾರತೀಯರಲ್ಲಿ ಇರಬೇಕಾದ ಮಾನಸಿಕ ಸ್ಥಿತಿ ಹಾಗೂ ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಿದೆ. ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಾ ಗಾಂಧಿ ಮತ್ತು ಜವಾಹರಲಾಲ್ ನೆಹರು ಕಂಡಿದ್ದ ಭಾರತದ ಕನಸು ಹಾಗೂ ನಾವು ಇಂದು ಸಾಗುತ್ತಿರುವ ಹಾದಿಯ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದ ಅವರು, ಜಾತಿ-ಭೇದವನ್ನು ಮರೆತು ನಾವೆಲ್ಲ ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಭ್ರಾತೃತ್ವ ಮತ್ತು ಸಮಾನತೆ ನಮ್ಮಲ್ಲಿ ಬೆಳೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಸರ್ಕಾರ ಯುವಕರಿಗಾಗಿ ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಕಾಲೇಜುಗಳಲ್ಲಿ ಯೂನಿಯನ್ ಚುನಾವಣೆಗಳನ್ನು ಮರು ಪ್ರಾರಂಭಿಸುವ ಕುರಿತು ಸರ್ಕಾರ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಪ್ರಜಾಪ್ರಭುತ್ವದ ಪ್ರಕ್ರಿಯೆ ಕಲಿಯಲು ವಿದ್ಯಾರ್ಥಿಗಳಿಗೆ ಸಂಸತ್ತಿನ ಮಾದರಿ ಅಧಿವೇಶನ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ತಾಲೂಕು ಮತ್ತು ಶಾಲಾ-ಕಾಲೇಜು ಮಟ್ಟದ ಸ್ಪರ್ಧೆಗಳಿಂದ ಆಯ್ಕೆಯಾದ ಏಳು ಜನ ವಿದ್ಯಾರ್ಥಿಗಳನ್ನು ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದರು.ಜಿಪಂ ಸಿಇಒ ಭುವನೇಶ್ ಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ ಜನರಿಗೋಸ್ಕರ ಇರುವ ಆಡಳಿತ. ನಮ್ಮ ಸಂವಿಧಾನದ ಪೀಠಿಕೆಯು ನಾವು ಭಾರತದ ಪ್ರಜೆಗಳು ಎಂಬ ಸಾಲಿನಿಂದಲೇ ಪ್ರಾರಂಭವಾಗುತ್ತದೆ. ಇದು ಯಾವುದೇ ಒಬ್ಬ ವ್ಯಕ್ತಿಯಿಂದ ಆರಂಭವಾಗುವುದಿಲ್ಲ, ಬದಲಾಗಿ ಭಾರತದ ಸಮಸ್ತ ಜನರಿಂದ ಸಾಗುತ್ತದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಎಸ್ಪಿ ಗುಂಜನ್ ಆರ್ಯ, ಎಸಿಪಿ ಪ್ರಶಾಂತ ಸಿದ್ದನಗೌಡರ, ಪ್ರೊಬೆಶನೇರಿ ಐಎಎಸ್ ಅನುಪ್ರಿಯಾ ಸಾಕ್ಯ, ಡಿಡಿಪಿಐ ಉಮೇಶ ಬೊಮ್ಮಕ್ಕನವರ ಇದ್ದರು.