ಎಲ್ಲರೂ ತಪ್ಪದೇ ಮತದಾನ ಮಾಡಬೇಕು: ತಾಪಂ ಇಒ

| Published : Apr 02 2024, 01:01 AM IST

ಸಾರಾಂಶ

ಮತದಾರರು ಮತದಾನದಿಂದ ದೂರ ಉಳಿಯಬಾರದು, ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ತಪ್ಪದೆ ಮತ ಹಾಕಿದಾಗ ತಾಲೂಕಿನ ಮತದಾನ ಪ್ರತಿಶತ ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಾಲೂಕಿನ ಮತದಾನ ಪ್ರತಿಶತವನ್ನು ಹೆಚ್ಚಿಸಬೇಕೆಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಅವರು ಕರೆ ನೀಡಿದರು.

ಅವರು ತಾಲೂಕಿನ ಅಳ್ಳಗಿ ಬಿ. ಗ್ರಾಮ ಪಂಚಾಯ್ತಿಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯ್ತಿ ಕಲಬುರಗಿ ತಾಲೂಕು ಪಂಚಾಯ್ತಿ ಅಫಜಲ್ಪುರ, ತಾಲೂಕು ಸ್ವಿಪ್ ಸಮಿತಿ ಅಫಜಲ್ಪುರ, ಎನ್‌ಆರ್‌ಎಲ್‌ಎಂ ಸಂಸ್ಥೆ, ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರು ಮತದಾನದಿಂದ ದೂರ ಉಳಿಯಬಾರದು, ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ತಪ್ಪದೆ ಮತ ಹಾಕಿದಾಗ ತಾಲೂಕಿನ ಮತದಾನ ಪ್ರತಿಶತ ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನರೇಗಾ ಸಹಾಯಕ ನಿರ್ದೇಶಕ ರಮೇಶ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತದಾನದ ಅವಶ್ಯಕತೆ ಇದ್ದು, ಅದಕ್ಕಾಗಿ ತಾಲೂಕಿನಾದ್ಯಂತ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ಗ್ರಾಮೀಣ ಮಹಿಳೆಯರು ತಮ್ಮ ಸುತ್ತಲಿನ ಜನರಿಗೆ ಮತದಾನ ಅರಿವು ಮೂಡಿಸುವುದರಿಂದ ಕಡ್ಡಾಯ ಮತದಾನ ಮಾಡಲು ಅನುಕೂಲವಾಗುತ್ತದೆ ಸಂಜೀವಿನಿ ಒಕ್ಕೂಟದ ಸದಸ್ಯರು ಪಂಚಾಯತ ವ್ಯಾಪ್ತಿಯಲ್ಲಿ ಪ್ರತಿಶತ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶರಣಪ್ಪ ಡೆಂಗಿ, ಎಫ್‌ಎಲ್‌ಸಿ ರಾಘವೇಂದ್ರ ಕಾರ್ಯದರ್ಶಿ ದೌಲಪ್ಪ ತಾಂತ್ರಿಕ ಸಂಯೋಜಕಿ ಮಾಲಾಶ್ರೀ, ತಾಲೂಕು ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ರಮೇಶ ಅಶೋಕ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.