ಬಳ್ಳಾರಿಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಶ್ರಮಿಸಿ

| Published : Mar 25 2024, 12:46 AM IST

ಬಳ್ಳಾರಿಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಶ್ರಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜನತೆಯು ಕ್ಷಯರೋಗದ ಕುರಿತು ಹೆಚ್ಚು ಕಾಳಜಿ ತೆಗೆದುಕೊಳ್ಳದೇ ಇರುವುದು ಕಂಡುಬರುತ್ತಿದೆ.

ಬಳ್ಳಾರಿ: ಜಗತ್ತಿನ ಹಲವು ದೇಶಗಳು ಸೇರಿದಂತೆ ಭಾರತದಲ್ಲೂ ಕ್ಷಯರೋಗ ಪ್ರಕರಣಗಳು ಇಂದಿಗೂ ಕಂಡು ಬರುತ್ತಿವೆ. ವೈದ್ಯರ ಸಲಹೆಯಂತೆ ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇರುವವರು ತಪ್ಪದೇ ಪರೀಕ್ಷೆ ಮಾಡಿಸುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡುವುದಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಕರೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರಗಳ ಆಶ್ರಯದಲ್ಲಿ ಸೌಕ್ಯಬೆಳಕು, ನಿತ್ಯ ಜೀವನ, ವಿಮುಕ್ತಿ ಇವರ ಸಹಕಾರದೊಂದಿಗೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಘಟಕದಿಂದ ಜಿಲ್ಲಾಸ್ಪತ್ರೆಯ ಡಿ.ಎನ್. ಬಿ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜನತೆಯು ಕ್ಷಯರೋಗದ ಕುರಿತು ಹೆಚ್ಚು ಕಾಳಜಿ ತೆಗೆದುಕೊಳ್ಳದೇ ಇರುವುದು ಕಂಡುಬರುತ್ತಿದೆ. ಈ ದಿಸೆಯಲ್ಲಿ ಸೂಕ್ತ ಜಾಗೃತಿ ನೀಡುವುದರ ಜೊತೆಗೆ ಕ್ಷಯರೋಗವನ್ನು ಸಕಾಲದಲ್ಲಿ ಗುರುತಿಸುವ ಕಾರ್ಯದೊಂದಿಗೆ ಚಿಕಿತ್ಸೆಯನ್ನು ಸಂಪೂರ್ಣಗೊಳಿಸಿ, ಕ್ಷಯಮುಕ್ತ ಬಳ್ಳಾರಿಯನ್ನು ಮಾಡುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶಬಾಬು, ಕಳೆದ ವರ್ಷದಲ್ಲಿ 53,708 ಜನರ ತಪಾಸಣೆ ಮಾಡುವ ಗುರಿ ಹೊಂದಿದ್ದರೂ 66,888 ಜನರಿಗೆ ಕಫ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 2747 ಜನರು ಖಚಿತ ಪಟ್ಟಿದ್ದಾರೆ. ಚಿಕಿತ್ಸೆ ಪೂರ್ಣಗೊಂಡು ಗುಣಮುಖರಾಗುವ ಪ್ರಮಾಣ ಶೇ.83ರಷ್ಟಿದ್ದು ರಾಜ್ಯಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಜಿಲ್ಲೆಗಳಲ್ಲಿ ಬಳ್ಳಾರಿ ಒಂದಾಗಿದೆ ಎಂದು ತಿಳಿಸಿದರು.ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ರೋಗವನ್ನು ತ್ವರಿತವಾಗಿ ಪತ್ತೆಹಚ್ಚಲು ಸಿಬಿನ್ಯಾಟ್ ಯಂತ್ರಗಳನ್ನು ವಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಟ್ರುನ್ಯಾಟ್ ಯಂತ್ರಗಳನ್ನು ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನ ಮಾಡಲಾಗಿದ್ದು, ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರು ಕ್ಷೇತ್ರ ಸಿಬ್ಬಂದಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಸಂಘ ಸಂಸ್ಥೆಗಳಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ರಾಮನಗೌಡ ಮತ್ತು ಸಂಗಡಿಗರು ಕ್ಷಯವನ್ನು ಕೊನೆಗೊಳಿಸಬಹು ಎಂಬ ಕಿರು ನಾಟಕ ಪ್ರಸ್ತುತ ಪಡಿಸಿದರು.ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜೆಎಸ್ ಡಬ್ಲ್ಯೂ ಹಿರಿಯ ಉಪಾಧ್ಯಕ್ಷ ಸಂಜಯ್ ಹಂಡೂರ್, ಪೆದ್ದಣ್ಣ ಬಿಡಲ, ರಾಜೇಶ್, ಡಾ.ಅಬ್ದುಲ್ಲಾ, ಡಾ.ವೀರೇಂದ್ರಕುಮಾರ್, ಡಾ.ಹನುಮಂತಪ್ಪ, ಅಧ್ಯಕ್ಷ ಡಾ.ಶ್ರೀನಿವಾಸಲು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಅರ್ಚನಾ, ಗಿರೀಶ್, ಸಣ್ಣ ಕೇಶವ, ವೀರೇಶ್, ತಾಲೂಕಾ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.