ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಎಲ್ಲರೂ ಶ್ರಮಿಸಿ: ಡಾ. ಸಮದ್ ಕೊಟ್ಟೂರು

| Published : Mar 30 2025, 03:00 AM IST

ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಎಲ್ಲರೂ ಶ್ರಮಿಸಿ: ಡಾ. ಸಮದ್ ಕೊಟ್ಟೂರು
Share this Article
  • FB
  • TW
  • Linkdin
  • Email

ಸಾರಾಂಶ

ಕರಡಿ ಸಸ್ಯಾಹಾರಿ ಮತ್ತು ಮೃದು ಸ್ವಭಾವದ ಪ್ರಾಣಿಯಾಗಿದ್ದು, ಅರಣ್ಯ ಮತ್ತು ಇತರ ವನ್ಯಜೀವಿ ಸಂತತಿ ಉಳಿಯಲು ಪ್ರಮುಖ ಕಾರಣವಾಗಿದೆ.

ವಿಶ್ವ ಕರಡಿ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕನ್ನಡಪ್ರಭ ವಾರ್ತೆ ಸಂಡೂರು

ಕರಡಿ ಸಸ್ಯಾಹಾರಿ ಮತ್ತು ಮೃದು ಸ್ವಭಾವದ ಪ್ರಾಣಿಯಾಗಿದ್ದು, ಅರಣ್ಯ ಮತ್ತು ಇತರ ವನ್ಯಜೀವಿ ಸಂತತಿ ಉಳಿಯಲು ಪ್ರಮುಖ ಕಾರಣವಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಪರಿಸರಪ್ರೇಮಿ ಡಾ. ಸಮದ್ ಕೊಟ್ಟೂರು ಹೇಳಿದರು.

ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಅರಣ್ಯ ಇಲಾಖೆಯ ಉತ್ತರ ಹಾಗೂ ದಕ್ಷಿಣ ವಲಯಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕರಡಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಜಗತ್ತಿನಲ್ಲಿ ಎಂಡು ರೀತಿಯ ಕರಡಿ ಪ್ರಭೇದಗಳಿವೆ. ಭಾರತದಲ್ಲಿ ಕಂಡು ಬರುವ ಕರಡಿಗೆ ಇಂಡಿಯನ್ ಸ್ತಾಥ್ ಬೇರ್ ಎಂದು ಕರೆಯುತ್ತಾರೆ. ಗ್ರಾಮೀಣ ಭಾಷೆಯಲ್ಲಿ ಮಬ್ಬು ಕರಡಿ ಎನ್ನುತ್ತಾರೆ. ಜಗತ್ತಿನ ಅತಿ ದೊಡ್ಡ ಕರಡಿ ಹಿಮಾಲಯ ಪ್ರದೇಶದಲ್ಲಿ ಕಂಡು ಬರುತ್ತದೆ. ಅದನ್ನು ಪೋಲಾರ್ ಬೇರ್ ಎಂದು ಕರೆಯುತ್ತಾರೆ ಎಂದರು.

ಕರಡಿಗಳ ರಕ್ಷಣೆ ಹಾಗೂ ಜಾಗೃತಿಗೋಸ್ಕರ ೧೯೯೨ರಿಂದ ಮಾ. ೨೩ರಂದು ವಿಶ್ವ ಕರಡಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ೧೯೭೨ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಜಾರಿಯಾದಾಗಿನಿಂದ ವನ್ಯಜೀವಿಗಳ ರಕ್ಷಣೆ ಆಗುತ್ತಿದೆ. ಸಾರ್ವಜನಿಕರು ಕೂಡ ಅರಣ್ಯ ಇಲಾಖೆಯ ಜತೆಗೆ ಕೈಜೋಡಿಸಿ ಅರಣ್ಯ ಹಾಗೂ ವನ್ಯಜೀವಿ ಸಂಕುಲ ಹೆಚ್ಚಿಸಲು ಶ್ರಮಿಸಬೇಕಿದೆ. ವನ್ಯಜೀವಿಗಳ ಮೂಲ ವಾಸಸ್ಥಾನವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ಅರಣ್ಯದಲ್ಲಿ ಕಲ್ಲು ಗಣಿಗಾರಿಕೆ, ಕಾರ್ಖಾನೆ, ರೆಸಾರ್ಟ್‌ಗಳ ನಿರ್ಮಾಣಕ್ಕೆ ಮುಂದಾದ ನಾವು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಆಪತ್ತುಗಳನ್ನು ಎದುರಿಸುವ ಸಂದರ್ಭ ನಮ್ಮ ಕಣ್ಣೆದುರಿಗಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.

ಸ್ನಾತಕೋತ್ತರ ಕೇಂದ್ರದ ಖನಿಜ ಸಂಸ್ಕರಣ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಶಶಿಧರ ಅಧ್ಯಕ್ಷತೆ ವಹಿಸಿ, ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ಭೂಮಿ ಕೇವಲ ಮನುಷ್ಯನಿಗಷ್ಟೇ ಅಲ್ಲದೆ, ಸಕಲ ಜೀವಿಗಳಿಗೂ ಸೇರಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.

ವಲಯ ಅರಣ್ಯಾಧಿಕಾರಿಗಳಾದ ಸೈಯದ್ ದಾದಾ ಖಲಂದರ್, ಮಂಜುನಾಥ, ಉಪನ್ಯಾಸಕರಾದ ಡಾ. ಕೆ.ಜಿ. ಸುಮಾ, ಲಕ್ಷ್ಮಣ್ ತೋಳಿ, ಡಾ. ಜಿ. ಹನುಮಂತ, ಡಾ. ಶಂಕರ ಗಿರಿ ದಳವಾಯಿ, ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮ ರಾಗಿ, ಪಾಪಯ್ಯ, ಡಿಆರ್‌ಎಫ್‌ಒ ತಿಪ್ಪೇಸ್ವಾಮಿ, ಪ್ರಶಾಂತ್‌ಕುಮಾರ್, ಇಮಾಮ್ ಸಾಬ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.