ಧಾರ್ಮಿಕ ಪರಂಪರೆ ಉಳಿಸಲು ಪ್ರತಿಯೊಬ್ಬರೂ ಶ್ರಮಿಸಿ

| Published : Dec 07 2024, 12:33 AM IST

ಧಾರ್ಮಿಕ ಪರಂಪರೆ ಉಳಿಸಲು ಪ್ರತಿಯೊಬ್ಬರೂ ಶ್ರಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕಾರ ಮನುಷ್ಯನ ಜೀವನದ ದಿಕ್ಕನ್ನು ಬದಲಿಸುತ್ತದೆ. ಶಾಂತಿ, ಸಹಬಾಳ್ವೆ,ಸಹಾನುಭೂತಿ, ಸ್ನೇಹ, ಪ್ರೀತಿಯಂಥ ಉದಾತ್ತ ಗುಣ ಬೆಳೆಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು

ಶಿರಹಟ್ಟಿ: ಯುವ ಜನತೆ ದುಶ್ಚಟಗಳಿಂದ ದೂರ ಉಳಿಯುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಬದುಕಿಗೆ ಹಾಸು ಹೊಕ್ಕಾಗಿರುವ ಗ್ರಾಮೀಣ ಕಲೆ ಅಳಿದು ಹೋಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಭಕ್ತಿಪೂರ್ವಕವಾದ ಡೊಳ್ಳಿನ ಪದಗಳನ್ನು ನಡೆಸುತ್ತಿರುವುದು ಮುಂದಿನ ಯುವ ಪೀಳಿಗೆಗೆ ಸಹಕಾರಿಯಾಗಲಿದೆ ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.

ಗುರುವಾರ ಸಂಜೆ ಬೀರೇಶ್ವರ ಸೇವಾ ಸಮಿತಿ ವತಿಯಿಂದ ಜರುಗಿದ ಕಾರ್ತಿಕೋತ್ಸವದ ೨ನೇ ದಿನದ ಕಾರ್ಯಕ್ರಮದಲ್ಲಿ ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಂಸ್ಕಾರ ಮನುಷ್ಯನ ಜೀವನದ ದಿಕ್ಕನ್ನು ಬದಲಿಸುತ್ತದೆ. ಶಾಂತಿ, ಸಹಬಾಳ್ವೆ,ಸಹಾನುಭೂತಿ, ಸ್ನೇಹ, ಪ್ರೀತಿಯಂಥ ಉದಾತ್ತ ಗುಣ ಬೆಳೆಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.

ಧಾರ್ಮಿಕ ಸಂಸ್ಕಾರ ಉಳಿಸಿ ಬೆಳೆಸುವ ಮೂಲಕ ದೇಶದ ಪರಂಪರೆ ಕಾಪಾಡಬೇಕು. ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಯ ಕಾಲದಲ್ಲಿ ಸಮಾಜದ ಯುವಕರು ಪ್ರಾಚೀನ ಹಾಗೂ ಪರಂಪರೆಯಾಗಿ ಉಳಿದುಕೊಂಡು ಬಂದಿರುವ ಡೊಳ್ಳಿನ ಪದಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.

ವಿಶೇಷವಾಗಿ ಸಮಾಜದಲ್ಲಿ ಹಿಂದುಳಿದ ಜನರು ಶಿಸ್ತುಬದ್ಧ ಜೀವನ ನಡೆಸದೇ ಹೋದರೆ ನಮ್ಮನ್ನು ಯಾರು ಉದ್ಧಾರ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಜೀವನ ತಿದ್ದುತ್ತಾರೆ, ಸಂಸ್ಕಾರ ಕೊಡುತ್ತಾರೆ ಎಂದು ಭಾವಿಸುವುದು ತಪ್ಪು.ಇಂತಹ ಹಿಂದುಳಿದ ಸಮಾಜದಲ್ಲಿರುವ ಮಕ್ಕಳು ಶಿಕ್ಷಣ ಪಡೆಯಬೇಕು. ಜತೆಗೆ ಕಡ್ಡಾಯವಾಗಿ ಶಾಲೆಗೆ ಹೋಗಬೇಕು. ಶಿಕ್ಷಣ ಪಡೆಯುವುದರ ಮೂಲಕ ಇಡೀ ಪ್ರಪಂಚದ ಆಗುಹೋಗು ತಿಳಿದುಕೊಳ್ಳಲು ಸಾಧ್ಯವಾಗುತ್ತಿದ್ದು, ಆಗ ನಮ್ಮ ಜೀವನ ಎತ್ತರಕ್ಕೆ ಹೋಗಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ಇಂದಿನ ಯುವಕರು ನಮ್ಮ ನಾಡಿನ ಧರ್ಮ, ಪರಂಪರೆ, ಸಂಸ್ಕೃತಿ, ಇತಿಹಾಸಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಲ್ಲದೆ, ಜಾನಪದ ಕಲೆ, ಗೀತೆಗಳು, ಡೊಳ್ಳಿನ ಪದಗಳು ನಮ್ಮ ನೈಜ ಚಿತ್ರಣ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಅಪಾರವಾದ ಸಂಗ್ರಹ ಹೊಂದಿದ್ದು, ಯುವಕರು ನಮ್ಮ ಈ ಪರಂಪರೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಹಾಸುಹೊಕ್ಕಾಗಿ ಬಂದಿರುವ ಈ ಪರಂಪರೆ ಉಳಿಸಿಕೊಂಡು ಹಿರಿಯರ ತತ್ವಾದರ್ಶ ಪಾಲಿಸಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿ, ಮಂಜುನಾಥ ಘಂಟಿ, ಡಾ. ಪ್ರಕಾಶ ಹೊಸಮನಿ, ನಾಗರಾಜ ಲಕ್ಕುಂಡಿ, ಪ್ರಕಾಶ ಕರಿ, ಎಂ.ಕೆ.ಲಮಾಣಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಎನ್.ವೈ. ಕರಿಗಾರ, ಬಸವರಾಜ ತುಳಿ, ಈರಯ್ಯ ಮಠಪತಿ, ವೀರೇಂದ್ರ ಪಾಟೀಲ ಮಾತನಾಡಿದರು.

ಭರಮಪ್ಪ ಶಿವಪ್ಪ ಪೂಜಾರ ಸಾನ್ನಿಧ್ಯ ವಹಿಸಿದ್ದರು. ದೇವಪ್ಪ ಮಾಗಡಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಹೊನ್ನೇಶ ಪೋಟಿ, ಮಹೇಶ ಹಾರೋಗೇರಿ, ಕರಿಯಪ್ಪ ಕುಳಗೇರಿ, ದೇವಪ್ಪ ಬಟ್ಟೂರ, ಅಕ್ಬರ್‌ಸಾಬ ಯಾದಗೀರಿ, ರಾಜು ಮಡಿವಾಳರ, ಶಿವಣ್ಣ ಕರಿಗಾರ, ಸುರೇಶ ತಳ್ಳಳ್ಳಿ, ಫಕ್ಕೀರೇಶ ಮುಶಪ್ಪನವರ, ರಾಮಣ್ಣ ಕಟ್ಟೇಕಾರ, ರಾಮಣ್ಣ ಘಂಟಿ ಇದ್ದರು.