ಈಗಿನ ಕಾಲಘಟ್ಟದಲ್ಲಿ ದೇಶದ ಏಕತೆಗಾಗಿ ಎಲ್ಲರೂ ಒಂದುಗೂಡಿ ನಿಲ್ಲಬೇಕಿದೆ ಎಂದು ಗಣ್ಯರು ಆತಂಕ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಇಂದಿನ ಕೃತಕ ಬುದ್ದಿಮತ್ತೆಯ ಪ್ರಪಂಚದಲ್ಲೂ ರಾಷ್ಟ್ರ ಮೊದಲು ಎಂಬ ಮನೋಭಾವದಿಂದ ಎಲ್ಲರೂ ದುಡಿಯಬೇಕು ಎಂದು ಎಬಿವಿಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎಸ್.ಬಾಲಕೃಷ್ಣ ಹೇಳಿದರು.ನಗರದ ಗೌಡ ಸಮಾಜದಲ್ಲಿ 3 ದಿನಗಳ ಕಾಲ ನಡೆಯಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) 45ನೇ ಕರ್ನಾಟಕ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ಬುಧವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗಿನ ಕಾಲಘಟ್ಟದಲ್ಲಿ ದೇಶದ ಏಕತೆಗಾಗಿ ಎಲ್ಲರೂ ಒಂದುಗೂಡಿ ನಿಲ್ಲಬೇಕಿದೆ. ವೈಟ್ ಕಾಲರ್ ಭಯೋತ್ಪಾದನೆಯ ಮೂಲಕ ಇಂದು ದೇಶವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಂತರರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಮಾತನಾಡಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ವರ್ತಿಸಬೇಕು, ಕೆಲವೊಂದು ತ್ಯಾಗಗಳನ್ನು ಮಾಡಬೇಕು, ಯಾವುದೇ ಕಾರಣಕ್ಕೂ ತಂದೆ, ತಾಯಿಗೆ ನೋವು ಕೊಡಬಾರದು.ಕೇವಲ ವಿಚಾರ ಮತ್ತು ತತ್ವಗಳಿಂದ ಜನರ ಜೀವನ ಬದಲಾಗುವುದಿಲ್ಲ. ಅವುಗಳನ್ನು ಅಳವಡಿಸಿಕೊಂಡರೆ, ಅನುಸರಿಸಿದರೆ ಮಾತ್ರ ಜೀವನ ಬದಲಾಗುತ್ತದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ತಂದೆ, ತಾಯಿಗೆ ನೋವು ಕೊಡಬೇಡಿ. ಯಾರು ತಂದೆ, ತಾಯಿಯನ್ನು ಪ್ರೀತಿಸುವರು ಅವರು ದೇಶವನ್ನು ಪ್ರೀತಿಸುತ್ತಾರೆ ಎಂದು ನುಡಿದರು.ಸಂಘಟನೆಯ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ರವಿ ಮಂಡ್ಯ ಮಾತನಾಡಿ ಎಬಿವಿಪಿ ಪ್ರಪಂಚದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. 77 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳ ಹಿತಕ್ಕಾಗಿ ಮಾತ್ರವಲ್ಲ ರಾಷ್ಟ್ರಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಈಶ್ವರ ಭಟ್ ಮಾತನಾಡಿ ಶಾಂತಿಪ್ರಿಯ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಎಬಿವಿಪಿ ಸಮ್ಮೇಳನ ನಡೆಯುತ್ತಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ರಾಣಿ ಮಾಚಯ್ಯ ಭಾಗವಹಿಸಿದ್ದರು. ಭಾರತದ ವೀರ ಯೋಧ ಜನರಲ್ ತಿಮ್ಮಯ್ಯ ಪ್ರದರ್ಶಿನಿಯನ್ನು ಉದ್ಘಾಟಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಳ್ಳ ಭಾಗವಹಿಸಿದ್ದರು.