ಸಾರಾಂಶ
ಪ್ರತಿಯೊಬ್ಬರು ಮಿತವಾಗಿ ನೀರು ಬಳಸುವತ್ತ ಹೆಚ್ಚು ಗಮನಹರಿಸಬೇಕು.
ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ
ಕನ್ನಡಪ್ರಭ ವಾರ್ತೆ ಯಲಬುರ್ಗಾಬೇಸಿಗೆಯಲ್ಲಿ ಹನಿ ಹನಿ ನೀರಿಗೂ ತೊಂದರೆ ಅನುಭವಿಸುವಂತಹ ಸ್ಥಿತಿ ಇದ್ದು, ಇದನ್ನು ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಂಡು ಮಿತವಾಗಿ ನೀರನ್ನು ಬಳಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ಕನ್ನೂರ ಹೇಳಿದರು.
ತಾಲೂಕಿನ ಬೇವೂರು ಗ್ರಾಮದ ಕೊಂಡದ ಮಲ್ಲೇಶ್ವರ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ, ಗ್ರಾಮ ಪಂಚಾಯಿತಿ, ಯಲಬುರ್ಗಾ ತಾಲೂಕು ಪಂಚಾಯಿತಿ ಇವುಗಳ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರಿತುಕೊಂಡು ನಮಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಬಳಸಬೇಕು ಎಂದರು.ನೀರು ಅಮೂಲ್ಯವಾದದ್ದು ಅದನ್ನು ವ್ಯರ್ಥವಾಗಿ ಚರಂಡಿ, ರಸ್ತೆಗೆ ಹರಿಬಿಡದಂತೆ ಗಮನಹರಿಸಬೇಕು. ಈಗ ನಾವು ನೀರನ್ನು ಎಷ್ಟು ಮಿತವಾಗಿ ಬಳಸಿಕೊಳ್ಳುತ್ತೇವೆಯೋ ಅಷ್ಟು ಮುಂದಿನ ಯುವಪೀಳಿಗೆಗೆ ಹೆಚ್ಚು ನೀರು ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹಾಗೂ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ ಮಾತನಾಡಿ, ಇನ್ನೂ ಎರಡ್ಮೂರು ತಿಂಗಳ ಕಾಲ ಬೇಸಿಗೆ ಇರುವುದರಿಂದ ನೀರನ್ನು ವ್ಯರ್ಥವಾಗಿ ಹರಿಬಿಡದಂತೆ ಅಕ್ಕಪಕ್ಕದ ಮನೆಯವರಿಗೆ ತಿಳಿ ಹೇಳಬೇಕು. ಜೊತೆಗೆ ಜಾನುವಾರುಗಳಿಗೆ, ಪ್ರಾಣಿ, ಪಕ್ಷಿಗಳಿಗೆ ನೀರಿನ ಅನುಕೂಲವನ್ನು ಕಲ್ಪಿಸಿಕೊಡುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಪಿಡಿಒಗಳು, ನೀರಘಂಟಿಗಳು ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಮೂಡಿಸುವ ಮೂಲಕ ನೀರನ್ನು ಹೆಚ್ಚು ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೇವೂರು ಪೊಲೀಸ್ ಠಾಣೆಯ ಪಿಎಸ್‌ಐ ಪ್ರಶಾಂತ ಸೇರಿದಂತೆ ಮತ್ತಿತರರಿದ್ದರು.