ಸಾರಾಂಶ
ಗಜೇಂದ್ರಗಡ: ಮೇ. 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ನೀತಿ ಸಂಹಿತೆ ನೋಡಲ್ ಅಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ. ಮೋಹನ ಹೇಳಿದರು.
ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಪಂ ವ್ಯಾಪ್ತಿಯ ಬೊಮ್ಮಸಾಗರ ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.ವರ್ಷದಿಂದ ವರ್ಷಕ್ಕೆ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಕೂಲಿಕಾರರು ಗ್ರಾಮೀಣ ಪ್ರದೇಶದ ಜನರು ಕಡ್ಡಾಯವಾಗಿ ಮತದಾನ ಮಾಡಬೇಕು. 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.
ಮತದಾನ ನಮ್ಮೆಲ್ಲರ ಹಕ್ಕಾಗಿದೆ.ಆದರಿಂದ ಮತದಾನದಿಂದ ಯಾರು ಹೊರಗುಳಿಯದೆ ಕಡ್ಡಾಯವಾಗಿ ಮತದಾನ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಮತದಾನ ಕುರಿತು ಪ್ಲೆ ಕಾರ್ಡ್ ಹಿಡಿದು ವಿಶೇಷವಾಗಿ ಜಾಗೃತಿ ಮೂಡಿಸಲಾಯಿತು.
ಬೇಸಿಗೆಯಲ್ಲಿ ಯಾರು ಗುಳೇ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಮಳೆಯಾಗುವವರೆಗೂ ನಿಮಗೆ ನಿರಂತರ ಕೆಲಸ ನೀಡಲಾಗುವುದು. ನೀವು ಸರಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.ಕೂಲಿಕಾರರು ಎನ್‍ಎಂಆರ್ ನಲ್ಲಿ ಹೆಸರು ಇದೇ ಇಲ್ಲ ಮೊದಲು ಪರಿಶಿಲಿಸಿ ನಂತರ ಕೆಲಸಕ್ಕೆ ಬರಬೇಕು. ಒಂದು ವೇಳೆ ಹೆಸರು ಇಲ್ಲದೆ ಕೆಲಸಕ್ಕೆ ಬಂದರೆ ಹಣ ಬರುವುದಿಲ್ಲ. ಜತೆ ಕೂಲಿಕಾರರು ಎರಡು ಬಾರಿ ಕಡ್ಡಾಯವಾಗಿ ಹಾಜರಿ ಹಾಕಿಸಬೇಕು. ಅದರಲ್ಲಿ ಒಂದು ಹಾಜರಿ ಹಾಕಿಸದಿದ್ದರೂ ಹಣ ಬರುವುದಿಲ್ಲ. ಕೂಲಿಕಾರರು ಅಳತೆಗೆ ತಕ್ಕಂತೆ ಪಡ ಕಡಿಯಬೇಕು. ನೀವು ಕಡಿಯದಿದ್ದರೆ ಕೂಲಿ ಅಳತೆ ಎಷ್ಟು ಇರುತ್ತದೆ ಅಷ್ಟೇ ಹಣ ಜಮಾ ಮಾಡುತ್ತಾರೆ ಸರಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ತಾಪಂ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಮುಂತಾದವರು ಮಾತನಾಡಿದರು. ಪಿಡಿಒ ಎಸ್.ಕೆ ಕವಡೇಲಿ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ಟಿಎಂಐಎಸ್ ಸಂಯೋಜಕ ವಸಂತ ಅನ್ವರಿ, ತಾಂತ್ರಿಕ ಸಂಯೋಜಕ ಪ್ರಿಯಾಂಕ ಅಂಗಡಿ, ಎಸ್.ಡಿ.ಎ ಪವಾಡಿಗೌಡ್ರ, ಟಿಎಎ ಸಿದ್ದು ಗುಡಿಮನಿ, ಬಿ.ಎಫ್.ಟಿ ಜ್ಯೋತಿ ವಡ್ಡರ, ಡಿಇಒ ಪ್ರಕಾಶ, ಜಿಕೆಎಂ ಶಿವಗಂಗಾ ಹುಲ್ಲಣ್ಣವರ, ಗ್ರಾಪಂ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.