ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಸಾಮಾಜಿಕ ಕ್ಷೇತ್ರ ವಿಭಿನ್ನ ನೆಲಯಲ್ಲಿ ಸಾಗಿದ್ದು ಎಲ್ಲರೂ ತಮ್ಮ ಜಾತಿ, ಧರ್ಮಗಳಿಂದ ಗುರುತಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಜಾತಿಗಿಂತ ಪ್ರೀತಿ ಮುಖ್ಯವೆಂಬುದ ಮರೆಯುತ್ತಿದ್ದಾರೆಂದು ಸಾಹಿತಿ ಡಾ.ಬಿ.ಎಲ್.ವೇಣು ಹೇಳಿದರು.ಸೃಷ್ಟಿ ಸಾಗರ ಪ್ರಕಾಶನ, ಬಾಪೂಜಿ ಶಿಕ್ಷಣ ಸಂಸ್ಥೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಕೆ.ಎಂ.ವೀರೇಶ್‍ರವರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಪ್ರಖರ ಬಂಡಾಯ ಗುಣ ಮಸುಕಾಗುತ್ತಿದೆ ಎಂದರು.
ಶಿಕ್ಷಣದ ಜೊತೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಗಳಿಗೆ ಕೆ.ಎಂ.ವೀರೇಶ್ ಹಿಂದಿನಿಂದಲೂ ಕೈಜೋಡಿಸಿಕೊಂಡು ಬರುತ್ತಿದ್ದಾರೆ. ಅವರ ಪ್ರಾಮಾಣಿಕ ನಿಷ್ಠೆ, ಪರಿಶ್ರಮಕ್ಕೆ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಕಲಾವಿದರಾಗಿರುವ ಕೆ.ಎಂ.ವೀರೇಶ್‍ರವರಿಗೆ ಕಲಾವಿದರ ಕಷ್ಟ, ಜಂಜಾಟ, ತಾಪತ್ರಯ ಚೆನ್ನಾಗಿ ಗೊತ್ತಿದೆ. ಒಬ್ಬರ ಸಂತೋಷವನ್ನು ಎಲ್ಲರೂ ಹಂಚಿಕೊಳ್ಳಬೇಕು, ಅಸೂಯೆ ಪಡಬಾರದು. ಧರ್ಮ ಜಾತಿಯಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ಮುಖ್ಯ ಎಂದರು.ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ, ಸಂತೋಷವನ್ನು ಹಂಚಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಪ್ರಶಸ್ತಿಗೆ ಕಾರಣವಾಗಿರುತ್ತದೆ. ಶಿಕ್ಷಣದ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಕೆ.ಎಂ.ವೀರೇಶ್‍ರವರ ಸಾಧನೆ ಗುರುತಿಸಿ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದು ಸಂತಸದ ಸಂಗತಿ. ಕಾಲದ ಅಪೇಕ್ಷೆಯನ್ನು ನಿರಾಕರಿಸಿ ವಿಮುಖದಲ್ಲಿ ಸಾಗುವವರನ್ನು ಯಾರು ಗುರುತಿಸು ವುದಿಲ್ಲ. ಹಾಗಾಗಿ ಪ್ರಶಸ್ತಿ ಪಡೆದುಕೊಂಡಿರುವವರ ಧನಾತ್ಮಕ ಚಿಂತನೆಯನ್ನು ಪರಿಗಣಿಸಬೇಕು ಎಂದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ, ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ ಡಾ.ಕೆ.ಎಂ.ವೀರೇಶ್‍ರವರದು ಬಹುಮುಖ ವ್ಯಕ್ತಿತ್ವ. ಅವಸರ, ಒತ್ತಡ, ಉದ್ವೇಗದ ನಡುವೆ ಎಲ್ಲರೂ ಆಪ್ತತೆಯನ್ನು ಕಳೆದುಕೊಳ್ಳುತ್ತಿರುವ ಈ ವೇಳೆ ವೀರೇಶ್ ಪ್ರೀತಿ ಸಂಪಾದಿಸುತ್ತಿದ್ದಾರೆ. ಅನೇಕ ಬಡ ಮಕ್ಕಳ ಶಿಕ್ಷಣಕ್ಕೆ ಮೊದಲಿನಿಂದಲೂ ನೆರವು ನೀಡುತ್ತ ಬರುತ್ತಿರುವ ಡಾ.ಕೆ.ಎಂ.ವೀರೇಶ್‍ರವರದು ಬಹುತ್ವದ ಗುಣ. ಎಲ್ಲರನ್ನೂ ಪ್ರೀತಿಸುವ ಗುಣವಿರುವ ವೀರೇಶ್‍ರವರು ವಿಶ್ವಮಾನವ ಪ್ರಜ್ಞೆಯಿಟ್ಟುಕೊಂಡಿದ್ದಾರೆ. ಇದೆಲ್ಲದರ ಸಾಧನೆಯ ಫಲವೇ ಗೌರವ ಡಾಕ್ಟರೇಟ್ ದೊರಕಲು ಕಾರಣ. ಅವರ ಶಿಕ್ಷಣ ಸಂಸ್ಥೆ ಆದರ್ಶ, ಚಿಂತನೆ, ಆಲೋಚನೆಯಿಟ್ಟುಕೊಂಡು ಸಾಗಲಿ ಎಂದು ಶುಭ ಹಾರೈಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಶೈಕ್ಷಣಿಕ, ಸಾಹಿತ್ಯಿಕ, ಕಲೆಯಲ್ಲಿ ವೀರೇಶ್‍ರವರು ಹೆಜ್ಜೆ ಗುರುತುಗಳನ್ನು ಮೂಡಿಸಿ ದ್ದಾರೆ. ಶಿಕ್ಷಣದ ಜೊತೆ ನಾಟಕಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಚಿತ್ರದುರ್ಗದಲ್ಲಿ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಇವರ ಪರಿಶ್ರಮ ಸಾಕಷ್ಟಿತ್ತು ಎನ್ನುವುದನ್ನು ನೆನಪಿಸಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೆ.ಎಂ.ವೀರೇಶ್, 1981ರಲ್ಲಿ ಮುರುಘಾ ಮಠಕ್ಕೆ ಜೀವನೋಪಾಯಕ್ಕಾಗಿ ಸೇರಿಕೊಂಡೆ. ಮುರುಗೇಶನ ಕೃಪೆಯಿಂದ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನನಗೆ ಗೌರವ ಡಾಕ್ಟರೇಟ್ ಕೊಡುತ್ತದೆ ಎಂದು ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ. ಸ್ವತಂತ್ರವಾಗಿರಬೇಕೆಂದು ಮುರುಘಾ ಮಠದಿಂದ ಹೊರ ಬಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯವನ್ನು ಆರಂಭಿಸಿದೆ. ಗೌರವ ಡಾಕ್ಟರೇಟ್ ಸಿಕ್ಕಿರುವುದು ಜವಾಬ್ದಾರಿ ಶಿಸ್ತು ಹೆಚ್ಚಿಸಿದೆ. ಸಾಮಾಜಿಕವಾಗಿ ಒಳ್ಳೆ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ದ್ವೇಷ, ಅಸೂಯೆಗಿಂತ ಎಲ್ಲರನ್ನೂ ಪ್ರೀತಿಯಿಂದ ಸಮಾನವಾಗಿ ಕಾಣುವುದು ನನ್ನ ಗುಣ ಎಂದರು.ದೊಣೆಹಳ್ಳಿ ಗುರುಮೂರ್ತಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಆರ್.ಜಯಲಕ್ಷ್ಮಿ ವೇದಿಕೆಯಲ್ಲಿದ್ದರು.ನಿವೃತ್ತ ಡಿ.ವೈಎಸ್ಪಿಗಳಾದ ಅಬ್ದುಲ್‍ರೆಹಮಾನ್, ಮಹಾಂತರೆಡ್ಡಿ, ಸೈಯದ್ ಇಸಾಕ್ ಪಾಲ್ಗೊಂಡಿದ್ದರು.