ಗುರುಕಾರುಣ್ಯದಿಂದ ಸಕಲವೂ ಸರ್ವಸಾಧ್ಯ: ಬುದ್ನಿ ಮಹಾರಾಜರು

| Published : Apr 03 2024, 01:35 AM IST

ಗುರುಕಾರುಣ್ಯದಿಂದ ಸಕಲವೂ ಸರ್ವಸಾಧ್ಯ: ಬುದ್ನಿ ಮಹಾರಾಜರು
Share this Article
  • FB
  • TW
  • Linkdin
  • Email

ಸಾರಾಂಶ

ನೀನೊಲಿದರೆ ಕೊರಡು ಕೊನರುವುದಯ್ಯಾ ಎಂಬ ಬಸವಣ್ಣನವರ ವಚನದಂತೆ ಗುರುಕಾರುಣ್ಯ ಹೊಂದಿದ ಭಕ್ತನಿಗೆ ಸಕಲವೂ ಸುಲಭ ಮತ್ತು ಸರ್ವವೂ ಸಾಧ್ಯವಾಗುತ್ತದೆ ಎಂದು ಬನಹಟ್ಟಿ ಶ್ರೀದೇವಿ ಮಠದ ಗಂಗಾಧರ ಬುದ್ನಿ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ನೀನೊಲಿದರೆ ಕೊರಡು ಕೊನರುವುದಯ್ಯಾ ಎಂಬ ಬಸವಣ್ಣನವರ ವಚನದಂತೆ ಗುರುಕಾರುಣ್ಯ ಹೊಂದಿದ ಭಕ್ತನಿಗೆ ಸಕಲವೂ ಸುಲಭ ಮತ್ತು ಸರ್ವವೂ ಸಾಧ್ಯವಾಗುತ್ತದೆ ಎಂದು ಬನಹಟ್ಟಿ ಶ್ರೀದೇವಿ ಮಠದ ಗಂಗಾಧರ ಬುದ್ನಿ ಮಹಾರಾಜರು ಹೇಳಿದರು.

ರಾಮಪುರದ ಹೂಗಾರ ತೋಟದಲ್ಲಿ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಶಂಕರ ಶಿವಾಚಾರ್ಯ ಶಿವಯೋಗಿಗಳ ೬೬ನೇ ಗುರುವಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾತೃಹೃದಯ, ತಂದೆಯ ವಾತ್ಸಲ್ಯ ಜೊತೆಗೆ ಶಿಕ್ಷಕನ ಬೋಧನಾ ಗುಣಗಳು ಓರ್ವ ಗುರುವಿನಲ್ಲಿ ಅಡಕಗೊಂಡಿರುತ್ತವೆ. ಸಮರ್ಥ ಗುರು ತನ್ನ ಶಿಷ್ಯರನ್ನು ಸರ್ವ ವಿಧದಿಂದಲೂ ಮತ್ತು ಸರ್ವ ಕಾಲದಲ್ಲಿಯೂ ರಕ್ಷಿಸುತ್ತ, ಶಿಷ್ಯ ಸನ್ಮಾರ್ಗದ ಪಥದಲ್ಲಿ ಸದಾ ನಡೆಯುವಂತೆ ಮತ್ತು ಇಹ-ಪರಗಳೆರಡರಲ್ಲೂ ಸರ್ವಥಾ ಮಾನ್ಯನಾಗುವಂತೆ ಸನ್ಮಾರ್ಗದ ದಾರಿಯನ್ನೇ ತೋತ್ತಾನೆ. ಭಕ್ತರನ್ನು ಸದಾ ಸಲಹುವ ಗುಣಗ್ರಾಹಿಯೇ ಗುರುವಾಗಿರುತ್ತಾನೆಂದರು.ಹೊಸೂರನ ಪರಮಾನಂದ ಶ್ರೀಗಳು ಮಾತನಾಡಿ, ಭಕ್ತರ, ಶಿಷ್ಯರ ಆತ್ಮೋನ್ನತಿಗೆ ಅಹರ್ನಿಶಿ ಶ್ರಮಿಸುವ ಸದ್ಗುರ ಸತ್-ಚಿತ್-ಆನಂದದ ಪ್ರಭೆಯನ್ನು ತನ್ನ ಬಳಿ ಬಂದವರಿಗೆ ತುಂಬುವ ಮೂಲಕ ಪರಿಪೂರ್ಣತೆ ಬೆಳಗಿಸುತ್ತಾನೆಂದರು. ಶಿವಾಪುರದ ಚಿದಾನಂದ ಗುರುಗಳು ಮಾತನಾಡಿ, ಸಕಲರ ಲೇಸನ್ನೇ ಬಯಸುತ್ತ, ತನ್ನ ಬದುಕನ್ನು ಪರರ ಕಲ್ಯಾಣ, ಅಭ್ಯುದಯಕ್ಕೆ ಕರ್ಪೂರದಂತೆ ಬದುಕುವ ಗುರು ಜಗವಂದ್ಯನಾಗಿದ್ದಾನೆಂದರು.

ರಾಮಪುರದ ರುದ್ರಪ್ಪ ಅರಳಿಕಟ್ಟಿ, ಕರಬಸು ಹಟ್ಟಿ, ಮಲ್ಲಿಕಾರ್ಜುನ ಹೊಸಮನಿ, ಮಹಾದೇವ ಬಾಡಗಂಡಿ, ರಾಚಪ್ಪ ಸಂಕಾನಟ್ಟಿ, ಸತೀಶ ಕಲಾದಗಿ, ಹೊಸೂರಿನ ಮಹಾಲಿಂಗ ಕರಿಜಾಡರ, ಬಸವರಾಜ ಕರಿಜಾಡರ, ಈರಪ್ಪ ಬುದ್ನಿ, ಬನಹಟ್ಟಿಯ ಮಹಾದೇವ ಆಸಂಗಿ, ಪ್ರಕಾಶ ಅರಳಿಕಟ್ಟಿ, ಬಸವರಾಜ ನುಚ್ಚಿ, ಶಿದ್ದರಾಯ ಸಂಕ್ರಟ್ಟಿ, ಶಂಕರೆಪ್ಪ ಬಾಡಗಂಡಿ, ರಬಕವಿಯ ಮಹಾದೇವ ಆರಗಿ, ಈರಪ್ಪ ಮನ್ಮಿ, ಈರಪ್ಪ ಮೂಲಿಮನಿ, ತೇರದಾಳದ ಬಸವರಾಜ ಚಿಂಚಖಂಡಿ, ಅಪ್ಪಾಸಾಬ ಹಳ್ಯಾಳ, ಅನಿಲ ಬಾಗಿ, ಪರಮಾನಂದ ಹಳ್ಳಿ, ಚಂದ್ರಶೇಖರ ಮುಂಡಗನೂರ, ಜಗದೀಶ ಬಡಿಗೇರ, ಈಶ್ವರ ಜಂಬಗಿ ಇತರರು ಉಪಸ್ಥಿತರಿದ್ದರು.