ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಾರ್ವಜನಿಕ ಚರ್ಚೆ ನಡೆಸದೆ ತೆಗೆದು ಹಾಕಿದೆ ಎಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರ ಆರೋಪವನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಳ್ಳಿಹಾಕಿದ್ದಾರೆ.
ಉಡುಪಿ: ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಾರ್ವಜನಿಕ ಚರ್ಚೆ ನಡೆಸದೆ ತೆಗೆದು ಹಾಕಿದೆ ಎಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರ ಆರೋಪವನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಳ್ಳಿಹಾಕಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಯುಪಿಎ ಸರ್ಕಾರದ ಮನರೇಗಾವನ್ನು ವೈಬಿ ಜಿ ರಾಮ್ ಜಿ ಎಂದು ಪರಿವರ್ತನೆ ಮಾಡುವಾಗ ಸಂಸತ್ತಿನಲ್ಲಿ ಚರ್ಚೆಯನ್ನೇ ನಡೆಸಿಲ್ಲ ಎಂದು ಖರ್ಗೆ ಸುಳ್ಳು ಹೇಳಿದ್ದಾರೆ ಎಂದು ಪ್ರತ್ಯಾರೋಪಿಸಿದರು.ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಸುದೀರ್ಘ ಎಂಟು ಗಂಟೆಗಳ ಕಾಲ ಚರ್ಚೆಯಲ್ಲಿ ಸಂಸದೆ ಪ್ರಿಯಾಂಕ ವಾದ್ರಾ ಸೇರಿದಂತೆ ಅನೇಕ ಪ್ರತಿಪಕ್ಷ ನಾಯಕರು ಪಾಲ್ಗೊಂಡಿದ್ದರು. ಸ್ವತಃ ರಾಹುಲ್ ಗಾಂಧಿ ಅವರೇ ಕಾಂಗ್ರೆಸ್ ಸಂಸದರಿಗೆ ಪ್ರತಿಭಟನೆ ನಡೆಸಲು ಪ್ರೇರಣೆ ನೀಡಿದ್ದರು. ಈ ಗದ್ದಲದ ನಡುವೆ ಬಹುಮತದಿಂದ ನೂತನ ಕಾಯ್ದೆ ಅನುಷ್ಠಾನಗೊಂಡಿದೆ ಎಂದು ಕೋಟ ಸ್ಪಷ್ಟನೆ ನೀಡಿದರು. ಹೊಸ ಕಾಯ್ದೆಯಲ್ಲಿ ಕಾರ್ಮಿಕರಿಗೆ ಕೇವಲ 60 ದಿನ ಕೆಲಸ ಸಿಗಲಿದೆ ಎಂದು ಖರ್ಗೆ ಹೇಳಿದ್ದಾರೆ. ಆದರೇ ಹೊಸ ಕಾಯ್ದೆಯಂತೆ ಕಾರ್ಮಿಕರಿಗೆ 125 ದಿನ ಕಡ್ಡಾಯ ಕೆಲಸ ನೀಡಲಾಗುತ್ತದೆ. ಯುಪಿಎ ಸರ್ಕಾರದಲ್ಲಿ 100 ದಿನ ಮಾತ್ರ ಕೆಲಸ ಇತ್ತು ಮತ್ತು ಕೇವಲ 125 ರು. ಕೂಲಿ ಪಾವತಿಸಲಾಗುತ್ತಿತ್ತು, ಈಗ ಮೋದಿ ಸರ್ಕಾರ 370 ವೇತನ ನೀಡುತ್ತಿದೆ ಎಂದರು
ಮನರೇಗಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಯಲು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ, ಈ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ ಮಾಸ್ಟರ್ ಪ್ಲಾನ್ ತಯಾರಿಸುತ್ತದೆ ಎನ್ನುವ ಖರ್ಗೆ ಅವರ ಆರೋಪ ಕೂಡ ಸುಳ್ಳು, ಕೇಂದ್ರ ಸರ್ಕಾರದ ಯಾವ ಹಸ್ತಕ್ಷೇಪವೂ ಇಲ್ಲ. ಪಂಚಾಯಿತಿ ವಿಕೇಂದ್ರೀಕರಣ ವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎನ್ನುವುದು ಕೂಡ ಸುಳ್ಳು, ವಿಕೇಂದ್ರಿಕರಣ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲಾಗಿದೆ ಎಂದು ಖರ್ಗೆ ಅವರ ಪ್ರತಿಯೊಂದು ಆರೋಪಕ್ಕೂ ಕೋಟ ಉತ್ತರ ನೀಡಿದರು. ಮನರೇಗಾದಲ್ಲಿ ಕರ್ನಾಟಕ ರಾಜ್ಯದಲ್ಲಿ 669 ಕೋಟಿ ರು. ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಕೋಟ ಪ್ರಶ್ನಿಸಿದರು.