ಕನ್ನಡಪ್ರಭ ವಾರ್ತೆ ಸವದತ್ತಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಳು ಕೊಳ್ಳದ ಸಂಗಮದಲ್ಲಿರುವ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಭಾನುವಾರ ಭಕ್ತರ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಯಲ್ಲಮ್ಮನ ಗುಡ್ಡದಲ್ಲಿ ಎಲ್ಲೆಡೆ ಉಧೋ... ಉಧೋ... ಉದ್ಘಾರ ಮೊಳಗಿ ಶ್ರೀದೇವಿಯ ದರ್ಶನದ ಮಂದಹಾಸ ನೆರೆದ ಭಕ್ತರಲ್ಲಿ ಮನೆ ಮಾಡಿತ್ತು.
ಕನ್ನಡಪ್ರಭ ವಾರ್ತೆ ಸವದತ್ತಿ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಳು ಕೊಳ್ಳದ ಸಂಗಮದಲ್ಲಿರುವ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಭಾನುವಾರ ಭಕ್ತರ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಯಲ್ಲಮ್ಮನ ಗುಡ್ಡದಲ್ಲಿ ಎಲ್ಲೆಡೆ ಉಧೋ... ಉಧೋ... ಉದ್ಘಾರ ಮೊಳಗಿ ಶ್ರೀದೇವಿಯ ದರ್ಶನದ ಮಂದಹಾಸ ನೆರೆದ ಭಕ್ತರಲ್ಲಿ ಮನೆ ಮಾಡಿತ್ತು.ಉತ್ತರ ಕರ್ನಾಟಕದ ಪವಿತ್ರ ಕ್ಷೇತ್ರವಾದ ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ಹುಣ್ಣಿಮೆಗಳು ಬಂತೆಂದರೆ ಜನಜಂಗುಳಿ ತುಂಬಿ ತುಳುಕುವುದು ಸಾಮಾನ್ಯ. ಆದರೆ, ಭಾರತ ಹುಣ್ಣಿಮೆ ಸಮಯದಲ್ಲಿ ಯಲ್ಲಮ್ಮನ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯ ಲಕ್ಷ ಸಂಖ್ಯೆಯನ್ನೂ ದಾಟುತ್ತದೆ. ಉಧೋ.. ಉದೋ.. ಜಮದಗ್ನಿ ನಿನ್ನಾಲ್ಕ ಉಧೋ.. ಉಧೋ.. ಎಂಬ ಭಕ್ತರ ಹರ್ಷೋದ್ಘಾರ ಶ್ರೀ ಕ್ಷೇತ್ರ ಪಾವಳಿಯಲ್ಲಿ ಗುನುಗುತ್ತಿರುವ ಸನ್ನಿವೇಶ ಜನರಲ್ಲಿನ ಭಕ್ತಿಯ ಪರಾಕಾಷ್ಠೆಯನ್ನು ತೋರುತ್ತಿರುತ್ತದೆ. ಶ್ರೀದೇವಿಯ ಪತಿ ಜಮದಗ್ನಿ ಸೇರಿದಂತೆ ಪುತ್ರ ಪರಶುರಾಮನನ್ನೊಳಗೊಂಡು ಶ್ರೀದೇವಿಯ ನಾಮಸ್ಮರಣೆ ಕ್ಷೇತ್ರದ ಭಕ್ತರಲ್ಲಿ ಕಂಡು ಬಂದಿತು.
ಕ್ಷೇತ್ರದ ಪರಿಸರವೆಲ್ಲ ಬಂಡಾರ, ಕುಂಕುಮಮಯ ವಾತಾವರಣದಿಂದ ಕೂಡಿದ್ದು, ಬಂಡಾರವನ್ನು ದೇವಿಗೆ ಸಮರ್ಪಿಸುತ್ತ ಭಕ್ತರು ಒಬ್ಬರಿಗೊಬ್ಬರು ಬಂಡಾರವನ್ನು ಎರಚುತ್ತ ದೇವಿಯ ದರ್ಶನ ಪಡೆದರು. ಶ್ರೀದೇವಿಗೆ ಹಣ್ಣು, ಕಾಯಿ ಒಡೆಸಿ, ಕರ್ಪುರ ಹಚ್ಚಿ ದೇವಿಯ ದರ್ಶನ ಮಾಡಿ ಪುನೀತರಾಗುತ್ತಾರೆ. ಯಲ್ಲಮ್ಮನಗುಡ್ಡಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಚಕ್ಕಡಿ ಹಾಗೂ ಮೋಟಾರು ವಾಹನಗಳಲ್ಲಿ ಆಗಮಿಸುವ ಭಕ್ತರು ದೇವಸ್ಥಾನದ ಆವರಣದಲ್ಲಿ ಬಿಡಾರ ಹೂಡಿ ಸಾಂಪ್ರದಾಯಕವಾಗಿ ದೇವಿಗೆ ಪಡ್ಡಲಗಿಯನ್ನು ಸಮರ್ಪಿಸಿದರು. ದೇವಸ್ಥಾನದ ಆವರಣದಲ್ಲಿಯೇ ಒಲೆ ಹೂಡಿ ಕಡಬು, ಹೋಳಿಗೆ, ಕಿಚಡಿ, ಅನ್ನ ಮಾಡಿ ಪಡ್ಡಲಗಿಯನ್ನು ತುಂಬಿಸಿ ಯಲ್ಲಮ್ಮದೇವಿಗೆ ನೈವೇಧ್ಯ ಅರ್ಪಣೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ.ಕ್ಷೇತ್ರದ ಪ್ರಮುಖ ವಸ್ತು ಕುಂಕುಮ ಬಂಡಾರದ ವ್ಯಾಪಾರ ಬಲು ಜೋರಾಗಿದೆ. ಮಹಿಳೆಯರು ಹೊಸ ಬಳೆಗಳನ್ನು ಕೈಗೆ ಸಿಂಗರಿಸಿಕೊಳ್ಳಲು ಬಳೆ ಅಂಗಡಿಗಳಲ್ಲಿ ಗುಂಪು ಗುಂಪಾಗಿ ಸೇರಿದ್ದರು. ಮಿಠಾಯಿ ವ್ಯಾಪಾರದೊಂದಿಗೆ ಜಾತ್ರೆಯಲ್ಲಿನ ಆಟಿಗೆ ಸಾಮಾನುಗಳ ವ್ಯಾಪಾರ ಜೋರಾಗಿತ್ತು.-----------