ಪಿತ್ರಾರ್ಜಿತ ಎರಡು ಎಕರೆ ಎಂಟು ಗುಂಟೆ ಜಮೀನಿನ ಮೇಲಿರುವ ಸರ್ಕಾರಿ ನಿಬಂಧನೆಯನ್ನು ತೆರವುಗೊಳಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಮಾರು ಒಂದು ವರ್ಷ ಕಳೆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಡಿ. ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಪ್ಪ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಸುಮಾರು ೧೦ ತಿಂಗಳ ಬಳಿಕ ಕಡತವನ್ನು ಹಾಸನ ಉಪವಿಭಾಗಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆಯಾದರೂ, ಈವರೆಗೂ ಅಂತಿಮ ಪರಿಹಾರ ದೊರೆತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಿತ್ರಾರ್ಜಿತ ಎರಡು ಎಕರೆ ಎಂಟು ಗುಂಟೆ ಜಮೀನಿನ ಮೇಲಿರುವ ಸರ್ಕಾರಿ ನಿಬಂಧನೆಯನ್ನು ತೆರವುಗೊಳಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಮಾರು ಒಂದು ವರ್ಷ ಕಳೆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಡಿ. ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಪ್ಪ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ದೂರಿಗೆ ಸ್ಪಂದಿಸಿರುವ ಲೋಕಾಯುಕ್ತ ಡಿವೈಎಸ್ಪಿ ಎಚ್.ಎಸ್. ಸುರೇಶ್ ಅವರು, ಕಡತವನ್ನು ತಹಸೀಲ್ದಾರ್‌ ಅವರಿಗೆ ಹಸ್ತಾಂತರಿಸಿ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕರ್ನಾಟಕ ಲೋಕಾಯುಕ್ತದ ಹಾಸನ ಘಟಕದ ವತಿಯಿಂದ ಚನ್ನರಾಯಪಟ್ಟಣದ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಮಹೇಶ್ ಅವರು ತಮ್ಮ ಅಹವಾಲು ಸಲ್ಲಿಸಿದರು. ಮಹೇಶ್ ಅವರ ಹೆಸರಿನಲ್ಲಿರುವ ಪಿತ್ರಾರ್ಜಿತ ಜಮೀನು ಭೂಮಿ ತಂತ್ರಾಂಶದಲ್ಲಿ ಸರ್ಕಾರಿ ನಿಬಂಧನೆಗೆ ಒಳಪಟ್ಟಿರುವುದಾಗಿ ನಮೂದಾಗಿದೆ. ಇದನ್ನು ತೆರವುಗೊಳಿಸುವಂತೆ ಸುಮಾರು ೧೧ ತಿಂಗಳ ಹಿಂದೆಯೇ ಅಗತ್ಯ ದಾಖಲೆಗಳನ್ನು ತಾಲೂಕು ಕಚೇರಿಗೆ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿದ ಸುಮಾರು ೧೦ ತಿಂಗಳ ಬಳಿಕ ಕಡತವನ್ನು ಹಾಸನ ಉಪವಿಭಾಗಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆಯಾದರೂ, ಈವರೆಗೂ ಅಂತಿಮ ಪರಿಹಾರ ದೊರೆತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.ಐದು ಬಾರಿ ವರದಿ ಸಲ್ಲಿಸಿದರೂ ಕಡತ ವಿಲೇವಾರಿಯಾಗಿಲ್ಲ

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಐದು ಬಾರಿ ವರದಿ ಸಲ್ಲಿಸಿದ್ದಾರೆ. ಆದರೂ ಭೂಮಿ ತಂತ್ರಾಂಶದಲ್ಲಿನ ನಮೂದನ್ನು ದೃಢೀಕೃತ ದಾಖಲೆಗಳೊಂದಿಗೆ ಪರಿಶೀಲಿಸಿ, ಸ್ಪಷ್ಟ ಹಾಗೂ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿ ಕಡತವನ್ನು ಹಿಂದಿರುಗಿಸಲಾಗಿದೆ. ಹೀಗಾಗಿ ಕಡತವು ಕಚೇರಿಗಳ ನಡುವೆ ಸಂಚರಿಸುತ್ತಿದ್ದು, ಟಪಾಲು ವಿಭಾಗದಲ್ಲಿಯೇ ಸಾಕಷ್ಟು ಸಮಯ ಉಳಿಯುತ್ತಿದೆ ಎಂದು ಮಹೇಶ್ ಆರೋಪಿಸಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ಅಲೆದಾಡಿದರೂ ಸಮಸ್ಯೆಗೆ ಪರಿಹಾರ ಸಿಗದಿರುವುದರಿಂದ ಅನಗತ್ಯ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳ ವಿಳಂಬಕ್ಕೆ ಕಡಿವಾಣ ಹಾಕಿ, ತಮ್ಮ ಜಮೀನಿನ ಮೇಲಿರುವ ಸರ್ಕಾರಿ ನಿಬಂಧನೆ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.ದೂರಿಗೆ ಸ್ಪಂದಿಸಿದ ಡಿವೈಎಸ್ಪಿ ಎಚ್. ಎಸ್. ಸುರೇಶ್, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಲು ಟಪಾಲು ವಿಭಾಗದ ಸಿಬ್ಬಂದಿಯಿಂದ ಹಿಡಿದು ತಹಸೀಲ್ದಾರ್‌ವರೆಗೂ ಸಮನ್ವಯ ಇರಬೇಕು ಎಂದು ಸೂಚಿಸಿದರು. ಟಪಾಲು ವಿಭಾಗಕ್ಕೆ ಬರುವ ಅರ್ಜಿಗಳನ್ನು ಮೇಲಧಿಕಾರಿಗಳು ಪ್ರತಿದಿನ ಪರಿಶೀಲಿಸಬೇಕು. ಕಡತಗಳು ಅನಗತ್ಯವಾಗಿ ವಿಳಂಬವಾಗದಂತೆ ನೋಡಿಕೊಳ್ಳುವುದರ ಜತೆಗೆ ಸಿಬ್ಬಂದಿ ನಿಷ್ಪಕ್ಷಪಾತವಾಗಿ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಬಳಿಕ ಮಹೇಶ್ ಅವರ ಕಡತವನ್ನು ತಹಸೀಲ್ದಾರ್‌ರಿಗೆ ಹಸ್ತಾಂತರಿಸಿ, ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ೧೫ ದಿನಗಳ ಗಡುವು

ಇದೇ ಕಾರ್ಯಕ್ರಮದಲ್ಲಿ ಆನೆಕೆರೆ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿರುವ ಪ್ರಕರಣವೂ ಪ್ರಸ್ತಾಪವಾಯಿತು. ಗ್ರಾಮದ ನಿವಾಸಿ ಚಂದ್ರಶೇಖರ್ ಅವರು ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಲಾಗಿತ್ತು. ಆದರೂ ಒತ್ತುವರಿ ತೆರವುಗೊಳಿಸಿಲ್ಲ ಎಂದು ಚಂದ್ರಶೇಖರ್ ಆರೋಪಿಸಿದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರಿಗೆ ನೋಟಿಸ್ ಜಾರಿ ಮಾಡಿ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ, ೧೫ ದಿನಗಳೊಳಗೆ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಿದರು. ನಿಗದಿತ ಅವಧಿಯಲ್ಲಿ ಒತ್ತುವರಿ ತೆರವುಗೊಳಿಸದಿದ್ದರೆ ಪ್ರಕರಣದಲ್ಲಿ ಪಿಡಿಒ ಅವರ ಪಾತ್ರವನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.ಸರ್ಕಾರಿ ಆಸ್ತಿಯನ್ನು ಸಂರಕ್ಷಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸರ್ಕಾರಿ ಭೂಮಿಯ ಒತ್ತುವರಿಯನ್ನು ತಡೆಯಲು ಸಾಧ್ಯ ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟರು.ವಿವಿಧ ಇಲಾಖೆಗಳ ವಿರುದ್ಧ ೧೦ ಅರ್ಜಿಗಳ ಸ್ವೀಕಾರ

ಹಾಸನ ಲೋಕಾಯುಕ್ತ ಡಿವೈಎಸ್ಪಿ ಎಚ್.ಎಸ್. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಒಂದು ಅರ್ಜಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಒಂಬತ್ತು ಅರ್ಜಿಗಳು ಸೇರಿದಂತೆ ಒಟ್ಟು ೧೦ ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ೧೫ ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್ಪಿ ಸೂಚಿಸಿದರು. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡದೆ, ನಿಯಮಾನುಸಾರ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಪದೇಪದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಜಿ.ಎಸ್. ಶಂಕರಪ್ಪ, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಜಿ.ಆರ್. ಶಿವಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಕೆ. ಶಿಲ್ಪಾ ಹಾಗೂ ಶಾಂತಿನಾಥ ಜೆ. ವಣ್ಣೂರ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಮತ್ತು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ, ಕಡತಗಳ ವಿಲೇವಾರಿಯಲ್ಲಿ ವಿಳಂಬ ತಪ್ಪಿಸುವುದು, ಸರ್ಕಾರಿ ಆಸ್ತಿಯನ್ನು ಸಂರಕ್ಷಿಸುವುದು ಹಾಗೂ ನಿಗದಿತ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಲೋಕಾಯುಕ್ತರು ಆಡಳಿತಾತ್ಮಕ ಹೊಣೆಗಾರಿಕೆಗೆ ಒತ್ತು ನೀಡಿದರು.