ಬಿಜೆಪಿ ಮತಕಳವು ಮಾಡಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಷಡ್ಯಂತ್ರ, ಅಕ್ರಮವಾಗಿ ನಮೂನೆ 7ರ ಸಲ್ಲಿಕೆಯಿಂದ ಬಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಬಿಜೆಪಿ ಮತಕಳವು ಮಾಡಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಷಡ್ಯಂತ್ರ, ಅಕ್ರಮವಾಗಿ ನಮೂನೆ 7ರ ಸಲ್ಲಿಕೆಯಿಂದ ಬಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಸಚಿವ ಸಹೋದ್ಯೋಗಿಗಳೊಂದಿಗೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ವಿವರ ನೀಡಿ, ಕೇಂದ್ರದ ಆಡಳಿತಾರೂಢ ಬಿಜೆಪಿ ಕೇಂದ್ರ ಚುನಾವಣೆ ಆಯೋಗವನ್ನು ದುರ್ಬಳಕೆ ಮಾಡಿಕೊಂಡು, ದೇಶದ ಲಕ್ಷಾಂತರ ಅರ್ಹ ಮತದಾರ ರನ್ನು ಪಟ್ಟಿಯಿಂದ ಹೊರಿಗಿಟ್ಟಿದೆ ಎಂದು ಆರೋಪಿಸಿದರು.
ಬೀದರ್ ಜಿಲ್ಲೆಯಲ್ಲಿ ಈ ಮೊದಲು 14,61,959 ಮತದಾರರಿದ್ದರು, ಆದರೆ ಎಸ್‌ಐಆರ್ ನಂತರ ಕರಡು ಮತದಾರರ ಸಂಖ್ಯೆ 12,20,916ಕ್ಕೆ ಇಳಿಕೆಯಾಗಿದೆ. ಹೀಗಾಗಿ 2 ಲಕ್ಷಕ್ಕೂ ಅಧಿಕ ಮತದಾರರನ್ನು ತೆಗೆಯಲಾಗಿದೆ, ಈ ಪೈಕಿ 1 ಲಕ್ಷಕ್ಕೂ ಹೆಚ್ಚಿನ ಮತದಾರರನ್ನು ಶಾಶ್ವತ ಸ್ಥಳಾಂತರ ಎಂದು ತೋರಿಸಿದ್ದಾರೆ. ಎಸ್‌ಐಆರ್ ಕುರಿತಾಗಿ ರಾಹುಲ್ ಗಾಂಧಿ ಅವರು ಮಾಡಿದ್ದ ಆರೋಪಕ್ಕೆ ಪುಷ್ಟಿ ಸಿಕ್ಕಿದೆ ಎಂದು ಹೇಳಿದ್ದಾರೆ.ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ದೂರ ಇಡುವ ಷಡ್ಯಂತ್ರದ ಮುಂದಿನ ಭಾಗವಾಗಿ, ತಮ್ಮ ವಿಧಾನಸಭಾ ಕ್ಷೇತ್ರ ಭಾಲ್ಕಿಯಲ್ಲಿ ಒಂದೇ ದಿನ 3244 ಮತದಾರರನ್ನು ಪಟ್ಟಿಯಿಂದ ಕೈಬಿಡಲು ನಮೂನೆ 7ನ್ನು 36 ಜನ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕರು ಬಿಜೆಪಿ ಕಾರ್ಯಕರ್ತರು. ಉದಾಹರಣೆಗೆ ಜಗನ್ನಾಥ್ ಎನ್ನುವ ಒಬ್ಬನೇ ವ್ಯಕ್ತಿ, ಒಂದೇ ದಿನ 241 ಪೂರ್ವ ಮುದ್ರಿತ ನಮೂನೆ 7 ಸಲ್ಲಿಸಿದ್ದಾನೆ, ಇದು ಪೂರ್ವನಿಯೋಜಿತ ಷಡ್ಯಂತ್ರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ಗೆ ಮತ ನೀಡುವವರನ್ನು ಗುರುತಿಸಿ, ಬಡವರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿದಂತೆ ಕೆಲವೊಂದು ಸಮುದಾಯಗಳಿಗೆ ಉದ್ದೇಶಪೂರ್ವಕವಾಗಿ ನಮೂನೆ 7ನ್ನು ಮೊದಲೇ ತರಿಸಿಕೊಂಡು ಅವರ ಸಂವಿಧಾನದತ್ತ ಹಕ್ಕು ಕಸಿಯುವ ಹುನ್ನಾರ ನಡೆಸಿದ್ದಾರೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.
ಒಳಸಂಚು ಬಹಿರಂಗ, ಎಫ್‌ಐಆರ್ ದಾಖಲು : ತಮಗೆ ಈ ಬಗ್ಗೆ ಮಾಹಿತಿ ಬಂದ ಬಳಿಕ ಮಾಹಿತಿ ಪಡೆಯಲು ಮುಂದಾದಾಗ ಕೆಲವರು ತಾವು ಸಲ್ಲಿಸಿದ್ದ ನಮೂನೆ 7ನ್ನು ಹಿಂಪಡೆದಿದ್ದಾರೆ. ಮತ್ತೆ ಕೆಲವು ಅರ್ಜಿಗಳು ಹಾಗೇ ಇವೆ. ತಮ್ಮ ಹೆಸರನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವ ವಿಷಯ ಅರ್ಹ ಮತದಾರರಿಗೆ ತಿಳಿದ ಬಳಿಕ ಅವರು ಒಳಸಂಚಿನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮತ ಕನ್ನ: ಈಗ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಈಗ ಆಖೈರಾಗುವ ಮತದಾರರ ಪಟ್ಟಿಯನ್ನೇ ಅವಲಂಬಿಸಬೇಕಾಗುತ್ತದೆ. ಆಗ ಅರ್ಹ ಮತದಾರರು ತಮ್ಮ ಮೂಲಭೂತಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ಖಂಡ್ರೆ ದೂರಿದರು.